ತುಮಕೂರು:
ಖೋ-ಖೋ ವಿಶ್ವಕಪ್ನಲ್ಲಿ ಗೆದ್ದಿರುವ ಕ್ರೀಡಾಪಟುಗಳಿಗೆ ಸರಿಯಾಗಿ ಗೌರವ ಸಿಗ್ತಾ ಇಲ್ಲ ಎಂದು, ಆರೋಪಿಸಿ ಇಂದು ಖೋಖೋ ಮಂಡಳಿಯವರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಹೌದು ತುಮಕೂರು ನಗರದಲ್ಲಿ ಖೋ-ಖೋ ಸಂಸ್ಥೆ ವತಿಯಿಂದ ನೂರಾರು ಮಂದಿ ಖೋ-ಖೋ ಕ್ರೀಡಾಪಟುಗಳು, ಖೋ ಖೋ ಸಂಸ್ಥೆ ರಾಜ್ಯಾಧ್ಯಕ್ಷ ನಿವೃತ್ತ ಎಸಿಪಿ ಲೋಕೇಶ್ವರ್ ನೇತೃತ್ವದಲ್ಲಿ ನಗರದ ಚರ್ಚ್ ಸರ್ಕಲ್ನಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ರಾಜ್ಯ ಖೋ-ಖೋ ಸಂಸ್ಥೆಯ ಸಮಸ್ಯೆಗಳ ಬಗ್ಗೆ ಹಾಗೂ ರಾಜ್ಯ ಕ್ರೀಡಾ ನೀತಿ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ನ ಸರ್ವಾಧಿಕಾರದಿಂದ ಕ್ರೀಡೆಗಳು ನಾಶವಾಗುತ್ತಿವೆ. ಅಲ್ಲದೇ ಕ್ರೀಡಾಪಟುಗಳಿಗೆ ಅನ್ಯಾಯ ಆಗ್ತಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಖೋ-ಖೋ ವಿಶ್ವಕಪ್ನಲ್ಲಿ ಗೆದ್ದ ಕ್ರೀಡಾಪಟುಗಳಿಗೆ "ಎ" ಗ್ರೇಡ್ ಮತ್ತು "ಬಿ" ಗ್ರೇಡ್ ಸರ್ಕಾರಿ ಹುದ್ದೆಗಳನ್ನು ನೀಡುವಂತೆ ಒತ್ತಾಯ ಮಾಡಿದರು. ಇನ್ನು ಇದೇ ವೇಳೆ ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಗೋವಿಂದರಾಜು ಅವರು ರಾಜಕೀಯ ಪ್ರಭಾವದಿಂದ ಅಸೋಸಿಯೇಷನ್ನ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದರಿಂದ ರಾಜ್ಯದ ಕ್ರೀಡಾಪಟುಗಳಿಗೆ ಅನ್ಯಾಯ ಆಗ್ತಿದೆ ಕೂಡಲೇ ಕರ್ನಾಟಕ ರಾಜ್ಯ ಒಲಂಪಿಕ್ ಅಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜುವನ್ನು ಬದಲಿಸುವಂತೆ ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಇನ್ನು ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯ ಖೋ-ಖೋ ಸಂಸ್ಥೆಯ ರಾಜ್ಯಾಧ್ಯಕ್ಷ ಲೋಕೇಶ್ವರ್ ಮಾತನಾಡಿ, ನಮ್ಮ ರಾಜ್ಯದ ಕ್ರೀಡಾಪಟುಗಳು ಉತ್ತಮವಾಗಿ ಆಡಿಕೊಂಡು ಬರ್ತಾ ಇದ್ದು, ಇಡೀ ದೇಶಕ್ಕೆ ಹೆಸರು ಮಾಡಿಕೊಂಡು ಬರ್ತಾ ಇದ್ದಾರೆ. ಆದರೆ ಅವರಿಗೆ ಸೂಕ್ತವಾದ ಗೌರವ ಆಗಲಿ, ಹುದ್ದೆಗಳು ಸಹ ಸಿಗ್ತಾ ಇಲ್ಲ. ಇದರಿಂದ ಅವರಿಗೆ ಅನ್ಯಾಯವಾಗಿ ಅವರು ಮೂಲೆಗುಂಪಾಗುತ್ತಿದ್ದಾರೆ. ಪಕ್ಕದ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಉದ್ಯೋಗವನ್ನು ಒದಗಿಸುತ್ತಿದ್ದಾರೆ. ಕೂಡಲೇ ನಮ್ಮ ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಆಗ್ತಿರೋ ಅನ್ಯಾಯವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.