ತುಮಕೂರು:
ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಆರಂಭವಾಗಿದ್ದು, ಮುಸ್ಲಿಂ ಬಾಂಧವರಂತೂ ಅತ್ಯಂತ ಭಕ್ತಿ- ಭಾವದಿಂದ ಉಪವಾಸ ನಡೆಸುತ್ತಿದ್ದಾರೆ. ರಂಜಾನ್ ಮಾಸದಲ್ಲಿ ಮುಸ್ಲಿಂ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಪಾಪಗಳಿಂದ ಮೋಕ್ಷ ಸಿಗುವುದು, ಅಲ್ಲಾನ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆ ಮುಸ್ಲಿಂ ಬಾಂಧವರಲ್ಲಿದೆ. ರಂಜಾನ್ ಹಬ್ಬದ ಅಂಗವಾಗಿ ಸುಮಾರು ಒಂದು ತಿಂಗಳುಗಳ ಕಾಲ ಮುಸ್ಲಿಮರು ಉಪವಾಸ ಕೈಗೊಳ್ಳಲಿದ್ದು ಬೆಳಗ್ಗೆ 5 ಗಂಟೆಯಿಂದ ಸಂಜೆ 6:30ವರೆಗೂ ಉಪವಾಸ ಕೈಗೊಂಡು, ನಮಾಜ್ ಮಾಡಿ ಅಲ್ಲಾಹುನ ಕೃಪೆಗೆ ಪಾತ್ರರಾಗುತ್ತಾರೆ.
ತುಮಕೂರಿನಲ್ಲೂ ರಂಜಾನ್ ಮಾಸವನ್ನು ಅತ್ಯಂತ ಭಕ್ತಿ ಭಾವದಿಂದ ನಡೆಸುತ್ತಿದ್ದಾರೆ. ರಂಜಾನ್ ಅಂಗವಾಗಿ ಉಪವಾಸ ನಿರತ ಮುಸ್ಲಿಮರು ಸೂರ್ಯ ಮುಳುಗುತ್ತಲೇ ಬಿಸಿ ಬಿಸಿಯಾದ ಸಮೋಸಗಳಿಗೆ ಮಾರು ಹೋಗುತ್ತಾರೆ. ಹೀಗಾಗಿ ತುಮಕೂರಿನ ಸದಾಶಿವ ನಗರದಲ್ಲಿ ಹಣ್ಣು- ಸಮೋಸ ಮಾರಾಟ ಕೂಡ ಜೋರಾಗಿಯೇ ಇರುತ್ತೆ. ಇಡೀ ಏರಿಯಾದ ಹಲವೆಡೆ ಸಮೋಸ, ಹಣ್ಣು, ಡ್ರೈಫ್ರೂಟ್ ಸ್ಟಾಲ್‌ಗಳು ಸಾಲು ಸಾಲಾಗಿದ್ದು, ಉಪವಾಸ ಬಿಡುವ ವೇಳೆ ಸಮೋಸ ತಿನ್ನಲು ಖರೀದಿಸೋದು ಕಂಡು ಬಂದಿತು. ಇನ್ನು ಬೆಳಗ್ಗೆಯಿಂದಲೂ ಈರುಳ್ಳಿ ಹೆಚ್ಚಿ, ಮೈದಾ ಹಿಟ್ಟು ಮಾಡಿಕೊಂಡು ಇಟ್ಟುಕೊಳ್ಳುತ್ತಾರೆ ಸಂಜೆ ಆಗ್ತಾ ಇದ್ದಂತೆ ಸಮೋಸ ಕರಿಯಲು ಶುರು ಮಾಡುತ್ತಾರೆ. ಮುಸ್ಲಿಂ ಬಾಂಧವರು ಉಪವಾಸ ಬಿಡುವ ವೇಳೆ ಸಮೋಸ, ಹಣ್ಣುಗಳನ್ನು ಖರೀಸುತ್ತಾರೆ. ಇದರಿಂದ ಸಮೋಸ ಅಂಗಡಿ ಇಟ್ಟುಕೊಂಡವರಿಗಂಥೂ ಒಳ್ಳೆ ವ್ಯಾಪಾರವಾಗುವ ಕಾಲ ಅಂತಾನೇ ಹೇಳ್ತಾ ಇದ್ದಾರೆ.
ಇನ್ನು ರೋಜಾ ಬಿಟ್ಟ ನಂತರ ಮುಸ್ಲಿಂರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ರಂಜಾನ್ ಸಮಯದಲ್ಲಿ ಘಮಘಮಿಸುವ ಸಮೋಸ ಸೇವನೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಸದಾಶಿವ ನಗರದ ಎಲ್ಲಾ ಕಡೆ ಹಾಗೂ ಮಸೀದಿಗಳ ಸಮೀಪದಲ್ಲಿ ವ್ಯಾಪಾರಿಗಳು ಸಾಲು ಸಾಲಾಗಿ ಸ್ಟಾಲ್ ತೆರೆದು ಸ್ಥಳದಲ್ಲೇ ಬಿಸಿ ಬಿಸಿ ಸಮೋಸ ಬೇಯಿಸಿ ಕೊಡ್ತಾ ಇರೋದು ಕಂಡು ಬಂದಿತು.