ಚಿಕ್ಕಬಳ್ಳಾಪುರ:
ಯುಗಾದಿ ಹಬ್ಬದ ದಿನವೇ ಸರ್ಕಾರಿ ಕಚೇರಿಯಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಸರ್ಕಾರಿ ಕಚೇರಿಯಲ್ಲಿದ್ದ ಕಂಪ್ಯೂಟರ್ ಸೇರಿ ಮಹತ್ವದ ದಾಖಲೆಗಳು ಸಂಪೂರ್ಣ ಭಸ್ಮವಾಗಿವೆ. ಚಿಕ್ಕಬಳ್ಳಾಪುರ ನಗರದ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಯುಗಾದಿ ಹಬ್ಬದ ರಾತ್ರಿ ಕಚೇರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ, ಕಚೇರಿಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಕಚೇರಿ ಪೂರ್ತಿ ಬೆಂಕಿ ವ್ಯಾಪಿಸಿದೆ. ಕಚೇರಿಯಲ್ಲಿದ್ದ ಇಲಾಖೆಗೆ ಸಂಬಂಧಿಸಿದ ದಾಖಲೆಗಳು, ಕಂಪ್ಯೂಟರ್ ಸೇರಿ ಎಲ್ಲವೂ ಸುಟ್ಟು ಹೋಗಿವೆ. ಅಲ್ಲದೇ ಕಚೇರಿಯ ಕಿಟಕಿ ಬಾಗಿಲುಗಳು ಕೂಡ ಸುಟ್ಟು ಹೋಗಿವೆ.
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಂಕಿಗೆ ಇಲಾಖೆಯ ಕಚೇರಿ ಸಂಪೂರ್ಣ ಸುಟ್ಟು ಹೋಗಿದೆ. ಕಚೇರಿಯಿಂದ ಹೊಗೆ ಆಡುತ್ತಿರೋದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕ ಬೆಂಕಿ ದುರಂತದ ಪ್ರಕರಣ ಬೆಳಕಿಗೆ ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ. ಇನ್ನು ರಾತ್ರಿ ವೇಳೆ ದುರಂತ ಸಂಭವಿಸಿರೋದರಿಂದ ಸದ್ಯ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಆದರೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿರೋ ಶಂಕೆ ವ್ಯಕ್ತವಾಗಿದ್ದು ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಹೊರಬರಬೇಕಿದೆ.