ತುಮಕೂರು:
ಸ್ಮಾರ್ಟ್ ಸಿಟಿ, ಗ್ರೇಟರ್ ಸಿಟಿ ಎಂಬ ಖ್ಯಾತಿ ಕೇವಲ ಬುಕ್ನಲ್ಲಿ ಬರೆಯಲು ಮಾತ್ರ ಸೀಮಿತ ಅಂತಾ ಅನಿಸುತ್ತೆ. ಏಕೆಂದರೆ ನಗರದಲ್ಲಿರೋ ಅವ್ಯವಸ್ಥೆಯನ್ನ ಕಂಡರೆ ತುಮಕೂರಿನ ಮರ್ಯಾದೆ ಮೂರು ಕಾಸಿಗೆ ಹರಾಜು ಆಗೋದು ಮಾತ್ರ ಪಕ್ಕಾ. ನಮ್ಮ ತುಮಕೂರು ಅಂತಾ ಹೆಮ್ಮೆಯಿಂದ ಬೀಗುವುದು ಯಾವ ಪುರುಷಾರ್ಥಕ್ಕೆ ಅನ್ನುವಂತೆ ಆಗಿದೆ ನಮ್ಮ ಸ್ಥಿತಿ. ಏಕೆಂದರೆ ರಾಶಿ ರಾಶಿ ಕಸ ಸುರಿದಿದ್ರು ಕೂಡ ಪಾಲಿಕೆ ಅಧಿಕಾರಿಗಳು ಮೂಸಿಯೂ ನೋಡುತ್ತಿಲ್ಲ. ಅಸ್ವಚ್ಛತೆ ಅನ್ನೋದು ತಾಂಡವ ಆಡ್ತಾ ಇದ್ದು, ತುಮಕೂರು ತಲೆ ತಗ್ಗಿಸುವಂತಾಗಿದೆ.
ತುಮಕೂರು ನಗರದಲ್ಲಿ ಖಾಸಗಿ ಬಸ್ಗಳ ಸಂಖ್ಯೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಅಲ್ಲದೇ ತುಮಕೂರು ಸುತ್ತಮುತ್ತದ ಹಳ್ಳಿಗಳಿಗೆ, ತಾಲೂಕುಗಳಿಗೆ ಖಾಸಗಿ ಬಸ್ಗಳಲ್ಲೇ ಪ್ರಯಾಣ ಮಾಡುವವರು ಹೆಚ್ಚಾಗಿದ್ದಾರೆ. ಹೀಗಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರೈವೈಟ್ ಬಸ್ ನಿಲ್ದಾಣಕ್ಕೆ ಬಂದು ಹೋಗ್ತಾರೆ. ಆದರೆ ಬಸ್ ನಿಲ್ದಾಣ ಎಷ್ಟು ಸ್ವಚ್ಛವಾಗಿದೆ ಎಂದರೆ, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು ಸುಮಾರು ದಿನಗಳಿಂದ ಕಸ ಅಲ್ಲಿಯೇ ಬಿದ್ದಿದ್ದರು ಕೂಡ ಪಾಲಿಕೆ ಅಧಿಕಾರಿಗಳು ಕಸವನ್ನು ಎತ್ತಿಸುವ ಕೆಲಸ ಮಾತ್ರ ಮಾಡ್ತಾ ಇಲ್ಲ. ಸುಮಾರು ದಿನಗಳಿಂದ ಕಸ ಅಲ್ಲಿಯೇ ಇರೋದರಿಂದ ಕಸ ದುರ್ನಾತ ಬೀರ್ತಾ ಇದ್ದು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಇದೆ.
ಇನ್ನು ಖಾಸಗಿ ಬಸ್ ನಿಲ್ದಾಣದಲ್ಲಿ ಸಾಕಷ್ಟು ಅಂಗಡಿಗಳಿವೆ, ಅಂಗಡಿಗಳ ತ್ಯಾಜ್ಯವನ್ನು ಬಸ್ ಸ್ಟ್ಯಾಂಡ್ ಆವರಣದಲ್ಲೇ ಸುರಿಯುತ್ತಿರೋದರಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಬಸ್ ನಿಲ್ದಾಣದಲ್ಲಿ ಒಂದೇ ಒಂದು ಕಸದ ಬುಟ್ಟಿಯನ್ನು ಪಾಲಿಕೆ ಇಟ್ಟಿಲ್ಲ. ಹಾಗಾಗಿ ಪ್ರಯಾಣಿಕರು, ಅಂಗಡಿಯವರು ಕಸವನ್ನು ಅಲ್ಲಲ್ಲಿ ರಾಶಿಯಂತೆ ಹಾಕ್ತಾ ಇದ್ದಾರೆ. ಜನರು ಅಷ್ಟು ತೆರಿಗೆ ಹಣವನ್ನು ಕಟ್ಟುತ್ತಿದ್ರು ಕೂಡ ಪ್ರಯಾಣಿಕರಿಗೆ ಉಪಯೋಗವಾಗುಂತಹ ಕೆಲಸ ಮಾತ್ರ ಮಾಡ್ತಾ ಇಲ್ಲ. ಇತ್ತ ಪ್ರಯಾಣಿಕರು ಕೂಡ ಎಲ್ಲೆಂದರಲ್ಲಿ ಗುಟ್ಕಾ ಪಾಕೇಟ್ಗಳು, ಬುಸ್ಕೇಟ್ ಕವರ್ಗಳು ಸೇರಿ ತ್ಯಾಜ್ಯಗಳನ್ನು ಸುರಿಯುತ್ತಿದ್ದು. ಕಸದ ಸಮಸ್ಯೆಗೆ ಪ್ರಯಾಣಿಕರು ಕೂಡ ಒಂದು ರೀತಿ ಕಾರಣರಾಗ್ತಿದ್ದಾರೆ. ಕಸದ ಸಮಸ್ಯೆಯಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ತೊಂದ್ರೆ ಆಗ್ತಾ ಇದೆ.
ಇನ್ನಾದರೂ ಶಾಸಕರು, ಅಧಿಕಾರಿಗಳು, ಪಾಲಿಕೆ ಎಚೆತ್ತುಕೊಂಡು ಪ್ರೈವೇಟ್ ಬಸ್ ನಿಲ್ದಾಣದಲ್ಲಿರೋ ಕಸದ ಸಮಸ್ಯೆಗೆ ಮುಕ್ತಿ ನೀಡಬೇಕಿದೆ. ಸ್ಮಾರ್ಟ್ ಸಿಟಿ ಅಂತಾ ಬೊಬ್ಬೆ ಹೊಡೆದುಕೊಳ್ಳುವುದರ ಬದಲು. ನಗರವನ್ನು ಸ್ವಚ್ಛವಾಗಿಟ್ಟುಕೊಂಡು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳು ಕೆಲಸ ಮಾಡಿಬೇಕಿದೆ.