ತುಮಕೂರು :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನಾರಾ, ಬರೋಡಾ ಸೇರಿ ರಾಜ್ಯದಲ್ಲಿರೋ ಬಹುತೇಕ ಬ್ಯಾಂಕ್ಗಳಲ್ಲಿ ಕನ್ನಡ ಭಾಷಿಕರಿಗಿಂತ ಅನ್ಯ ಭಾಷಿಕರೇ ಹೆಚ್ಚಾಗಿರೋದರಿಂದ ಬ್ಯಾಂಕ್ ವ್ಯವಹಾರ ಮಾಡಲು ಗ್ರಾಹಕರು ಪರದಾಡುವಂತಾಗಿದೆ. ಬ್ಯಾಂಕ್ನಲ್ಲೂ ಕೂಡ ಕನ್ನಡ ಭಾಷೆ ಕಡ್ಡಾಯ ಮಾಡುವಂತೆ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಿದರೂ ಕೂಡ ಯಾವುದೇ ಪ್ರಯೋಜನ ಆಗ್ತಾ ಇಲ್ಲ, ಬ್ಯಾಂಕ್ ನಲ್ಲಿ ಬಹುತೇಕ ಕೆಡ ಸಿಬ್ಬಂದಿ ಅನ್ಯ ಭಾಷಿಕರಾಗಿದ್ದು, ಕನ್ನಡ ಮಾತನಾಡಲು ಬಾರದಿರೋದರಿಂದ ಗ್ರಾಹಕರು ಬ್ಯಾಂಕ್ನ ಕೆಲಸ ಮಾಡಿಕೊಳ್ಳಲು ಆಗದೇ ಪರದಾಡುವಂತಾಗಿದೆ. ಸಿಟಿಯವರಾದರೆ ಅಷ್ಟೋ ಇಷ್ಟೋ ಇಂಗ್ಲೀಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳೋದರಿಂದ ನಗರಗಳಲ್ಲಿರೋ ಬ್ಯಾಂಕ್ಗಳಲ್ಲಿ ಹೇಗೋ ಕೆಲಸ ಮಾಡಿಕೊಂಡು ದೂಡುತ್ತಿದ್ದಾರೆ. ಆದರೆ ಹೋಬಳಿಗಳಲ್ಲಿರೋ ಬ್ಯಾಂಕ್ಗಳಿಗೆ ಸುತ್ತ ಮುತ್ತ ಇರೋ ಹಳ್ಳಿಗಳ ರೈತರು ಬರ್ತಾ ಇರೋದರಿಂದ, ಅವರಿಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆ ಬರಲ್ಲ, ಇದರಿಂದ ಬ್ಯಾಂಕ್ ಸಿಬ್ಬಂದಿ ಜೊತೆ ಸರಿಯಾಗಿ ವ್ಯವಹರಿಸಲಾಗದೇ ರೈತರು ಅಲೆದಾಡುವಂತಹ ಪರಿಸ್ಥಿತಿ ಇದೆ. ಈಗ ಇಂತಹದ್ದೇ ಪ್ರಕರಣ ತುಮಕೂರು ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿರೋ ಹೊನ್ನುಡಿಕೆಯಲ್ಲಿರೋ ಸ್ಟೇಟ್ ಬ್ಯಾಂಕ್ನಲ್ಲಿ ಒರಿಸ್ಸಾ, ಆಂದ್ರ, ತಮಿಳುನಾಡು ಸೇರಿದಂತೆ ಸಾಕಷ್ಟು ಮಂದಿ ಅನ್ಯ ಭಾಷಿಕರೇ ಇರೋದರಿಂದ ಹಣ ಡ್ರಾ ಮಾಡಲು, ಡೆಪಾಸಿಟ್ ಮಾಡಲು, ಕೆವೈಸಿ ಅಪ್ಡೇಟ್, ಸಾಲ ಪಡೆಯಲು, ಪೆನ್ಷನ್ ಸೇರಿ ಇತರೆ ಬ್ಯಾಂಕ್ ಸೇವೆ ಪಡೆದುಕೊಳ್ಳಲು ನಿತ್ಯ ಬ್ಯಾಂಕಿನಲ್ಲೇ ಕಾಯುವಂತಾಗಿದೆ. ದಿನಗಟ್ಟಲೇ ಕಾದರು ಯಾವುದೇ ಪ್ರಯೊಜನ ಇಲ್ಲದೇ ಗ್ರಾಹಕರು ಮನೆಗೆ ವಾಪಸ್ ಹೋಗಿ ಮರುದಿನ ಮತ್ತೆ ಬ್ಯಾಂಕ್ಗೆ ಬಂದು ಕಾಯುವಂತಹ ಪರಿಸ್ಥಿತಿ ಇದೆ ಎಂದು ಗ್ರಾಹಕರು ಅಳಲು ತೋಡಿಕೊಳ್ತಾ ಇದ್ದಾರೆ.
ಈ ಬ್ಯಾಂಕ್ನ ಗ್ರಾಹಕರೊಬ್ಬರು ಕಳೆದ ಮೂರು ವರ್ಷಗಳ ಹಿಂದೆ ನಿಧನ ಹೊಂದಿದ್ದು, ಅವರ ಅಕೌಂಟ್ನಲ್ಲಿ ಸುಮಾರು 2 ಲಕ್ಷ ಅಮೌಂಟ್ ಇದ್ದು, ನಾಮಿನಿ ಕೂಡ ಮಾಡಿಸಿರಲಿಲ್ಲ. ಹೀಗಾಗಿ ತಮ್ಮ ತಂದೆಯ ಅಕೌಂಟ್ನಲ್ಲಿರೋ ಅಮೌಂಟ್ಅನ್ನು ಡ್ರಾ ಮಾಡಲು ಮಗ ನಿತ್ಯ ಬ್ಯಾಂಕ್ಗೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಕೂಡ ಸರಿಯಾಗಿ ಸ್ಪಂದಿಸ್ತಾ ಇಲ್ಲ ಅಂತಾ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಈ ಬ್ಯಾಂಕ್ನ ಮ್ಯಾನೇಜರ್ ಕೂಡ ಒರಿಸ್ಸಾ ಮೂಲದವರಾಗಿದ್ದು ಅವರಿಗೂ ಕನ್ನಡ ಬರೋದಿಲ್ಲ. ಹೀಗಾಗಿ ಇಲ್ಲಿರೋ ಬ್ಯಾಂಕ್ ಸಿಬ್ಬಂದಿಯನ್ನು ಬದಲಿಸಿ ಕನ್ನಡ ಭಾಷೆ ಬರುವವರನ್ನು ನೇಮಿಸಿ ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ನಗರದ ಪ್ರದೇಶದ ಜನರಿಗೆ ಅಲ್ವ ಸ್ವಲ್ಪ ಇಂಗ್ಲೀಷ್, ಹಿಂದಿ ಸೇರಿ ನಾನಾ ಭಾಷೆಗಳ ಅರಿವು ಇರೋದರಿಂದ ಹೇಗೋ ಮ್ಯಾನೇಜ್ ಮಾಡಿಕೊಂಡು ಹೋಗ್ತಾರೆ, ಆದರೆ ಹಳ್ಳಿಯಲ್ಲಿರೋ ಅನಕ್ಷರಸ್ಥರು ಹೇಗೆ ವ್ಯವಹರಿಸಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಗ್ರಾಮಾಂತರ ಭಾಗದಲ್ಲಿರೋ ಬ್ಯಾಂಕ್ಗಳಲ್ಲಿ ಕನ್ನಡಿಗರನ್ನು ನೇಮಿಸಿ ರೈತರಿಗೆ, ಅನಕ್ಷರಸ್ಥರಿಗೆ ಅನುಕೂಲ ಮಾಡಿಕೊಡಬೇಕಿದೆ ಅನ್ನೋದು ಪ್ರಜಾಶಕ್ತಿಯ ಕಳಕಳಿಯಾಗಿದೆ.