ತಿಪಟೂರು : ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಭರ್ಜರಿ ಮಳೆಯ ಕಾರಣಕ್ಕೆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಿಪಟೂರಿನಲ್ಲಿ ಮುಂಜಾನೆ ಸುರಿದ ಭಾರೀ ಮಳೆಗೆ ಮರದ ಗೊಂಬೆಯೊಂದು ಅರಸೀಕೆರೆ NH26 ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ತಿಪಟೂರಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿಯೇ ದೊಡ್ಡ ದೊಡ್ಡ ಮರಗಳು ಇವೆ. ಮರದ ಕೊಂಬೆಗಳು ದಾರಿಗೆ ಬಾಗಿ ಬೆಳೆದಿವೆ. ಇಂತಹ ರಸ್ತೆಯಲ್ಲಿ ಬೆಳೆದಿರುವ ಕೊಂಬೆಗಳನ್ನು ಬೆಸ್ಕಾಂ ಅಧಿಕಾರಿಗಳು ಕತ್ತರಿಸಬೇಕು. ಆದ್ರೆ ತಿಪಟೂರು ನಗರಸಭೆಯ ನಿರ್ಲಕ್ಷ್ಕಕ್ಕೆ ಇಂದು ಸುರಿದ ಮಳೆಗೆ ಕೊಂಬೆಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದ್ರೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಗರಸಭೆ ಸಿಬ್ಬಂದಿ ಕೊಂಬೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇನ್ನು ಇದೇ ರಸ್ತೆಯಲ್ಲಿರುವ ಎಸ್ ಎಸ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಮುಂಬಾಗದಲ್ಲಿ ಭಾರೀ ಗಾತ್ರದ ಮರವೊಂದು ಶಿಥಿಲಗೊಂಡಿದೆ. ಯಾವಾಗ ಬೇಕಾದರೂ ದೊಡ್ಡ ಮರ ಬಿದ್ದು ಅವಾಂತರ ಸೃಷ್ಠಿಯಾಗಬಹುದು. ಮರದ ಬುಡ ಸಂಪೂರ್ಣವಾಗಿ ಹಾಳಾಗಿದ್ದು, ಬೇರು ಹೊರಬಂದಿವೆ. ಸುರಿಯುತ್ತಿರುವ ಮಳೆಯಿಂದಾಗಿ ಯಾವಾಗಬೇಕಾದರೂ ಬಿದ್ದು ಸಾವು ನೋವು ಸಂಭವಿಸಬಹುದು. ತಿಪಟೂರು ನಗರಾದ್ಯಂತ ಇಂತಹ ಅದೆಷ್ಟೋ ಮರಗಳು ಶಿಥಿಲಗೊಂಡಿವೆ. ಕೂಡಲೇ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮಕೈಗೊಂಡು ಮುಂದೆ ಆಗುವ ಅನಾವುತವನ್ನು ತಡೆಯಬೇಕಾಗಿದೆ.