ಸಿನಿಮಾ :
ವರನಟ, ನಟಸಾರ್ವಭೌಮ, ಡಾ. ರಾಜ್‌ಕುಮಾರ್ ಅವರ ಜನ್ಮದಿನ ಇಂದು.ಏಪ್ರಿಲ್ 24, 1929ರಲ್ಲಿ ಚಾಮರಾಜನಗರದ ದೊಡ್ಡ ಗಾಜನೂರಿನಲ್ಲಿ ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷಮ್ಮರ ಹಿರಿಯ ಮಗನಾಗಿ ಜನಿಸಿದರು
1954ರ ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿ ಅತ್ಯುತ್ತಮ ನಟ ಎನಿಸಿಕೊಂಡವರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ನಟರಲ್ಲಿ ಮೊದಲಿಗೆ ನಿಲ್ಲುತ್ತಾರೆ. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿಯೂ ಸಹ ಹೆಸರು ಮಾಡಿದ್ದರು.
ಡಾ.ರಾಜ್‌ಕುಮಾರ್ ಅವರು ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಜನಪ್ರಿಯ ನಟರಾಗಿದ್ದರು. ಇವರ ಅಭಿನಯಕ್ಕೆ ಇಡೀ ಭಾರತೀಯ ಚಿತ್ರರಂಗದ ಹಿರಿಯ ನಾಯಕ ನಟರು, ನಟಿಯರು ಬೆರಗಾಗಿದ್ದರು. ಭಕ್ತ ಪಾತ್ರವಾಗಲಿ, ಐತಿಹಾಸಿಕ ಚಿತ್ರಗಳಾಗಲಿ, ದೇವರ ಪಾತ್ರವಾಗಲಿ, ಪತ್ತೆದಾರಿ ಇಲ್ಲವೇ ಗೂಡಾಚಾರಿ ಪಾತ್ರದಲ್ಲಾಗಲಿ ರಾಜ್ ಕುಮಾರ್ ಗೆ ರಾಜ್‌ಕುಮಾರ್ ಮಾತ್ರ ಸಾಟಿ. ಎಂತಹದ್ದೇ ಪಾತ್ರ ಕೊಟ್ಟರು ಕೂಡ ಆ ಪಾತ್ರಕ್ಕೆ ಜೀವತುಂಬಿ ನಟಿಸುತ್ತಿದ್ದರು.
ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡ್ರು. ಡಾ.ರಾಜ್ ಕುಮಾರ್ ಅವ್ರು ಓದಿದ್ದು ಕೇವಲ 3 ನೇ ಕ್ಲಾಸ್ ಆದ್ರೆ ಇಂಗ್ಲೀಷ್ ಕಲಿತು ನಿರಾರ್ಗಳವಾಗಿ ಮಾತನಾಡ್ತಿದ್ರು. ಇವರ ನಟನೆ ಮತ್ತು ಡೈಲಾಗ್‌ಗಳಿಗೆ ಮನಸೋತೋರೇ ಇಲ್ಲ. 30 ಜುಲೈ 2000 ರಂದು ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್‌ನಿಂದ ಡಾ. ರಾಜ್ ಅವರು ಗಾಜನೂರಿನಲ್ಲಿರುವ ತಮ್ಮ ತೋಟದ ಮನೆಯಿಂದ ಅಪಹರಣವಾದರು. ಸುಮಾರು 100 ದಿನಗಳ ನಂತರ ನವೆಂಬರ್‌ನಲ್ಲಿ ಬಿಡುಗಡೆಗೊಂಡಿದ್ದರು.
ಇನ್ನು ಡಾ.ರಾಜ್‌ಕುಮಾರ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, 10 ಬಾರಿ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ, 9 ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ, ಕೆಂಟಕಿ ಕರ್ನಲ್ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ. ಹೀಗೆ ಹತ್ತು ಹಲವು ಪ್ರಶಸ್ತಿಗೆ ಬಾಜನರಾಗಿದ್ದರು.
ಅಂತಿಮ ದಿನಗಳಲ್ಲಿ ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ ಡಾ. ರಾಜ್, 12ಏಪ್ರಿಲ್, 2006 ಬುಧವಾರದಂದು ಮಧ್ಯಾಹ್ನ 1.45ರ ಸುಮಾರಿಗೆ, ಬೆಂಗಳೂರಿನಲ್ಲಿ ತಮ್ಮ ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದ ಡಾ. ರಾಜ್ ಅವರ ಅಗಲಿಕೆಯಿಂದ, ಒಂದು ಸುವರ್ಣ ಯುಗದ ಅಂತ್ಯವಾದಂತಾಯಿತು. ಇಡೀ ರಾಜ್ಯಾದಲ್ಲಿ ಅಂದು ಮೌನ ಆವರಿಸಿತ್ತು. ಡಾ.ರಾಜ್ ಪಾರ್ಥೀವ ಶರೀರ ನೋಡಲು ಜನಸಾಗರವೇ ಹರಿದುಬಂದಿತ್ತು. ಡಾ.ರಾಜ್‌ಕುಮಾರ್ ಜನ್ಮದಿನವನ್ನು ಇಂದು ನಾಡಿನಾದ್ಯಂತ ಸಂಭ್ರಮದಿಂದ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅವರು ಕರುನಾಡಲ್ಲೆ ಹುಟ್ಟಿ ಬರಬೇಕೆನ್ನುವುದು ಎಲ್ಲಾ ಅಭಿಮಾನಿಗಳ ಆಸೆಯಾಗಿದೆ.