ತಿಪಟೂರು :
ಕಾಶ್ಮೀರಾದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನಾ ಕಿಚ್ಚು ಜೋರಾಗ್ತಿದೆ. ಇತ್ತ ಭಯೋತ್ಪಾದಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಿಪಟೂರು ಬಂದ್‌ಗೆ ಹಿಂದೂಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದು, ತಿಪಟೂರು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ತಿಪಟೂರು ನಗರದಲ್ಲಿ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು.
ತಿಪಟೂರು ನಗರದ ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ದೇಗುಲದಿಂದ ನಗರಸಭಾ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಸಾಗಿದ್ದು, ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಹಿಂದೂ ಪರ ಮುಖಂಡರು ಭಾಗಿಯಾಗಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಲೋಕೇಶ್ವರ್ ಭಾಗಿಯಾಗಿದ್ದು, ಉಗ್ರರ ಕೃತ್ಯವನ್ನು ಖಂಡಿಸಿದರು. ಇನ್ನು ತಿಪಟೂರಿನಲ್ಲಿ ಬಂದ್‌ಗೆ ಅಂಗಡಿ ಮಾಲೀಕರು ಬೆಂಬಲ ಸೂಚಿಸಿದ್ದು, ತಿಪಟೂರು ಪಟ್ಟಣದ ಬಿ.ಎಚ್.ರಸ್ತೆ, ಸ್ಟೇಷನ್ ರಸ್ತೆ, ಹಾಲ್ಕುರ್ಕೆ ರಸ್ತೆ, ಎ.ಪಿ.ಎಂ.ಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿ ಎಲ್ಲವೂ ಸಂಪೂರ್ಣ ಸ್ಥಬ್ಧವಾಗಿತ್ತು.
ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಲೋಕೇಶ್ವರ್, ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಹಿಂದೂಗಳ ಮೇಲೆ ನಡೆದಿರುವ ಭಯೋತ್ಪಾದಕ ದಾಳಿ ತೀವ್ರ ಖಂಡನೀಯ. ಪ್ರವಾಸಕ್ಕೆ ತೆರಳಿದ್ದ ಅಮಾಯಕರ ಹಿಂದೂಗಳ ಮೇಲೆ ಪಾಕಿಸ್ತಾನ ಪ್ರಯೋಜಿತ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸುವ ಮೂಲಕ ಭಾರತದ ಸಮಸ್ತ ಹಿಂದುಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ಮೆರವಣಿಗೆ ಬಳಿಕ ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯ್ತು. ಪ್ರತಿಭಟನೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಖ್ಯಾತ ವಕೀಲರಾದ ಶ್ರೀಶ, ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್, ಮಡೇನೂರು ವಿನಯ್. ನಗರಸಭೆ ಮಾಜಿ ಸದಸ್ಯ ಪ್ರಸನ್ನ ಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು.