ಚಿಕ್ಕಬಳ್ಳಾಪುರ :
ಕುಡಿಯುವ ನೀರಿನ ಬೋರ್ ವೆಲ್ ಗೆ ಅಳವಡಿಸಲಾಗಿದ್ದ ಟ್ರಾನ್ಸ್ ಫಾರ್ಮರ್ ಅನ್ನು ಅಧಿಕಾರಿಗಳು ಲಂಚ ಪಡೆದು ಅಕ್ರಮವಾಗಿ ಮತ್ತೊಬ್ಬರಿಗೆ ವರ್ಗಾವಣೆ ಮಾಡ್ತಿದ್ದಾರೆ. ಕೂಡಲೇ ಅಂತಹ ಭ್ರಷ್ಟ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಿಕ್ಕಬಳ್ಳಾಪುರ ಬೆಸ್ಕಾಂ ಕಛೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಬೋರ್ ವೆಲ್ ಗೆ ಅಳವಡಿಸಲಾಗಿತ್ತು. ಆದರೆ ನೀರಿಗಾಗಿ ಅಳವಡಿಸಿದ್ದ ಟ್ರಾನ್ಸ್ ಫಾರ್ಮರ್ ರನ್ನು ಬೆಸ್ಕಾಂ ಅಧಿಕಾರಿಗಳೇ ಖುದ್ದು ಮತ್ತೊಬ್ಬರಿಗೆ ವರ್ಗಾವಣೆ ಮಾಡಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಈ ವೇಳೆ ರೈತ ಮುಖಂಡ ಗೋಪಾಲ್ ಮಾತನಾಡಿ, ಅಧಿಕಾರಿಗಳು ಲೈನ್‌ಮನ್‌ಗಳ ಜೊತೆ ಸೇರಿ ದಾಖಲೆಗಳನ್ನು ಪರಿಶೀಲನೆ ಮಾಡದೆ ಸಾರ್ವಜನಿಕರಿಗಾಗಿ ಅಳವಡಿಸಿದ್ದ ಟ್ರಾನ್ಸ್ ಫಾರ್ಮರ್‌ಗಳನ್ನು ಲಂಚದ ಆಸೆಗೆ ಬಿದ್ದು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡ್ತಿದ್ದಾರೆ. ಈ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಲೈನ್‌ಮನ್ ಮತ್ತು ಭ್ರಷ್ಟ ಅಧಿಕಾರಿಗಳನ್ನು ವರ್ಗಾಯಿಸಬೇಕೆಂದು ಆಗ್ರಹಿಸಿದರು.
ಇನ್ನು ರೈತರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸ್ತಾರೆ ಅನ್ನೋ ವಿಚಾರ ತಿಳಿದ ಮೇಲಾಧಿಕಾರಿಗಳು ಕಚೇರಿಯಿಂದ ಕಾಲ್ಕಿತ್ತಿದ್ದಾರೆ. ಇತ್ತ ರೈತರು ಮಾತ್ರ ಅಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಯನ್ನು ಕೇಳಬೇಕು ಅಂತ ಪಟ್ಟುಹಿಡಿದಿದ್ದಾರೆ.
ಇನ್ನು ಈ ವೇಳೆ ಎಇ ಸ್ವರೂಪ್ ಪ್ರತಿಕ್ರಿಯಿಸಿ ನಿಮ್ಮ ಮನವಿಗೆ ನಾವು ಸ್ಪಂದಿಸ್ತೀವಿ. ಈ ಮೊದಲು ಟ್ರಾನ್ಸ್ ಫಾರ್ಮರ್ ಗಳು ಎಲ್ಲಿ ಇದ್ದವೋ ಅದೇ ಜಾಗಕ್ಕೆ ಸ್ಥಳಾಂತರ ಮಾಡ್ತಿವಿ. ಲೈನ್ ಮನ್ ಮಂಜುನಾಥ್ ನಮಗೆ ಮಿಸ್ ಗೈಡ್ ಮಾಡಿರೋದರಿಂದ ಈ ಸಮಸ್ಯೆಯಾಗಿದೆ. ಅವರ ಮೇಲೆ ಕ್ರಮ ಜರುಗಿಸಲಾಗುತ್ತೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಯಾಗಲ್ಲ ಅಂತ ಭರವಸೆ ನೀಡಿದರು.