ಮಧುಗಿರಿ :
ಮಧುಗಿರಿ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಂಯುಕ್ತಾಶ್ರಯದಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ತಹಶೀಲ್ದಾರ್ ಶಿರೀನ್ ತಾಜ್, ಗ್ರೇಟ್ 2 ತಹಶೀಲ್ದಾರ್ ಶ್ರೀನಿವಾಸ್, ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ, ಆರ್ ಸತ್ಯನಾರಾಯಣ, ನಿರ್ದೇಶಕ ಬಿ.ಎಸ್ ರವೀಶ್, ಖಜಾಂಚಿ ಕೆ. ಲಕ್ಷ್ಮಿ ಪ್ರಸಾದ್, ಕಾರ್ಯದರ್ಶಿ ಶಕುಂತಲಾ, ಪುರಸಭಾ ಸದಸ್ಯ ಕೆ. ನಾರಾಯಣ್, ನಿರ್ದೇಶಕರಾದ ಕೆ. ರಂಗನಾಥ್, ಹಿರಿಯ ವಕೀಲ ಪಿ. ದತ್ತಾತ್ರೇಯ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ವೇಳೆ ಶ್ರೀ ಶಂಕರ ಸೇವಾ ಸಮಿತಿ ನಿರ್ದೇಶಕ ಬಿ,ಎಸ್ ರವೀಶ್ ಮಾತನಾಡಿ ಅಲ್ಪ ಅವಧಿಯಲ್ಲೇ ಅಗಾಧವಾದ ಪಾಂಡಿತ್ಯವನ್ನು ಬೆಳೆಸಿಕೊಂಡು ಇಡೀ ವಿಶ್ವದಲ್ಲೇ ಅಪ್ರತಿಮವಾದ ಸಾಧನೆಯನ್ನು ಮಾಡಿದವರು ಶ್ರೀ ಶಂಕರಾಚಾರ್ಯರು ಎಂದು ತಿಳಿಸಿದರು. ಅಲ್ಲದೇ ಬೌದ್ದ ಧರ್ಮ ಹೆಚ್ಚಾಗಿದ್ದ ಕಾಲದಲ್ಲಿ ಇಡೀ ಭಾರತ ದೇಶ ಸುತ್ತಿ ಮೇರು ವ್ಯಕ್ತಿಗಳ ಜೊತೆ ಚರ್ಚೆ ಸಂವಾದಗಳ ಮೂಲಕ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದವರು ಶಂಕರಾಚಾರ್ಯರು ಎಂದರು.
ಇನ್ನು ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ. ಆರ್. ಸತ್ಯನಾರಾಯಣ ಮಾತನಾಡಿ, ಸನಾತನ ಧರ್ಮದ ಉಳಿವಿಗಾಗಿ ಜನ್ಮತಾಳಿದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಆಚರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಇನ್ನು ಸೋಮವಂಶ ಆರ್ಯ ಕ್ಷತ್ರಿಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣ ರಾಜು ಮಾತನಾಡಿ, ನಾವೆಲ್ಲರೂ ಒಟ್ಟಾಗಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.
ಇನ್ನು ಈ ವೇಳೆ ಮಾತನಾಡಿದ ಹಿರಿಯ ವಕೀಲ ಪಿ. ದತ್ತಾತ್ರೇಯ ಶ್ರೀ ಶಂಕರರು ಒಂದು ವರ್ಗಕ್ಕೆ, ಒಂದು ಪಂಗಡಕ್ಕೆ ಸೀಮಿತರಾಗಿಲ್ಲ. ಇಡೀ ಹಿಂದೂ ಸಮಾಜಕ್ಕೆ ಸೇರಿದವರಾಗಿದ್ದಾರೆ. ಹಿಂದೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಸಾಧಕರಾದ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಇಡೀ ಹಿಂದೂ ಸಮಾಜ ಆಚರಿಸಿದಾಗ ಶಂಕರ ಜಯಂತಿಗೆ ಸಾರ್ಥಕತೆ ಬರುತ್ತದೆ ಎಂದರು.