ಶಿರಾ:
ಶಿರಾ ನಗರ ಅದೆಷ್ಟು ಬೆಳೆದ್ರೂ ಕೂಡ ತಾಲೂಕಿನ ಅಭಿವೃದ್ದಿಯ ವಿಚಾರದಲ್ಲಿ ಮಾತ್ರ ಹಿಂದೆಯೇ ಉಳಿದಿದೆ. ಅದ್ರಲ್ಲೂ ಕೆಲವು ಗ್ರಾಮಗಳಲ್ಲಿ ಸೂಕ್ತ ಬಸ್ ನಿಲ್ದಾಣವಿಲ್ಲದೇ ಗ್ರಾಮಸ್ಥರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೌದು ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರೋ ಬರಗೂರು ಗ್ರಾಮದಲ್ಲಿ ಇದುವರೆಗೂ ಬಸ್ ನಿಲ್ದಾಣವೇ ಇಲ್ಲವಂತೆ, ಅಲ್ದೇ ರಸ್ತೆ ಮೇಲೆಯೇ ಕಸ ಸುರಿಯುತ್ತಿದ್ದು, ಗ್ರಾಮದಲ್ಲಿ ಅಸ್ವಚ್ಚತೆ ತಾಂಡವವಾಡ್ತಾ ಇದೆ, ಇದ್ರಿಂದ ಸಾರ್ವಜನಿಕರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರೂ ಸೂಕ್ತ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸ್ತಾ ಇದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಬರಗೂರು ಗ್ರಾಮ ಆಂದ್ರಪ್ರದೇಶದ ಗಡಿಯಲ್ಲಿದ್ದು, ವೇಗವಾಗಿ ಅಭಿವೃದ್ದಿಯಾಗ್ತಿದೆ. ಹಳ್ಳಿಗಳ ಜನರು ಬೇರೆ ಬೇರೆ ಊರುಗಳಿಗೆ ತೆರಳಲು ಇಲ್ಲಿಂದಲೇ ಹೋಗಬೇಕು, ಆದ್ರೆ ಇಂತಹ ಊರಿನಲ್ಲೇ ಬಸ್ ನಿಲ್ದಾಣ ಇಲ್ಲ ಅಂದ್ರೆ ಆಶ್ಚರ್ಯವಾಗುತ್ತೆ. ಈ ಗ್ರಾಮದಲ್ಲಿ ಶಾಲಾ ಕಾಲೇಜುಗಳು, ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ವಿದ್ಯುತ್ ಸ್ಟೇಶನ್ ಸೇರಿದಂತೆ ಎಲ್ಲಾ ವ್ಯವಸ್ಥೆ ಇದೆ. ಆದ್ರೆ ಬಸ್ ನಿಲ್ದಾಣ ಮಾತ್ರ ಇಲ್ಲ ಅನ್ನೋದು ವಿಪರ್ಯಾಸವೇ ಸರಿ, ದಿನನಿತ್ಯ ಹಳ್ಳಿಗಳಿಂದ ಶಾಲಾ ಕಾಲೇಜಿಗೆ ತೆರಳುವ ಮಕ್ಕಳು, ವಯಸ್ಸಾದವರಿಗೆ ಸೂಕ್ತ ಬಸ್ ನಿಲ್ದಾಣದ ವ್ಯವಸ್ಥೆಯಿಲ್ಲ, ಶೌಚಾಲಯ ವ್ಯವಸ್ಥೆಯಿಲ್ಲದೇ ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ಲೋ ಸ್ಥಳದಲ್ಲಿ ಒಟ್ಟಿಗೆ ಎರಡು ಮೂರು ಬಸ್ ನಿಂತ್ರೆ ಜನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಆಗಿ ಯಾವ ಬಸ್ ಬರುತ್ತೆ, ಹೋಗುತ್ತೆ ಅನ್ನೋದು ಸಾರ್ವಜನಿಕರಿಗೆ ತಿಳಿತಿಲ್ಲ. ಅಲ್ದೇ ರಸ್ತೆಬದಿ ವ್ಯಾಪಾರಸ್ಥರು ರಸ್ತೆಗಳಲ್ಲೇ ಗಾಡಿ ನಿಲ್ಲಿಸಿ ವ್ಯಾಪಾರ ಮಾಡ್ತಿರೋದ್ರಿಂದ ಜನಸಾಮಾನ್ಯರು ಪರಾದಾಡುವಂತಾಗಿದೆ. ಇದನ್ನೆಲ್ಲ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರು ಗಮನಿಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಒಟ್ಟಾರೆ ಇಲ್ಲಿನ ರಾಜಕೀಯ ನಾಯಕರ ಹಿತಾಸಕ್ತಿ ಕೊರತೆಯೋ, ಇಲ್ಲ ನಿರಾಸಕ್ತಿಯೋ ಗೊತ್ತಿಲ್ಲ. ಸಾರ್ವಜನಿಕರು ಮಾತ್ರ ನಿತ್ಯ ಪರದಾಡ್ತ ಇದಾರೆ. ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿ ಜನರ ಕಷ್ಟಕ್ಕೆ ಪರಿಹಾರ ನೀಡ್ತಾರಾ ಕಾದು ನೋಡಬೇಕಿದೆ.