ಯುಗಾದಿ ಅಂದರೆ ಅಲ್ಲಿ ಹೋಳಿಗೆ ಇರಲೇಬೇಕು. ಯುಗಾದಿಯಲ್ಲಿ ಹೋಳಿಗೆ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಅದರಲ್ಲೂ ಬಗೆ ಬಗೆಯ ಹೋಳಿಗೆಗಳು ನೋಡಬಹುದು. ಅದರಲ್ಲಿ ಕಾಯಿ ಹೋಳಿಗೆ ಹಾಗೆ ಬೇಳೆ ಹೋಳಿಗೆಯನ್ನು ಮನೆಯಲ್ಲಿ ಎಲ್ಲರು ಕುಳಿತು ಸವಿಯುತ್ತಾರೆ. ಕ್ಯಾರೆಟ್ ಹೋಳಿಗೆ ಮಾತ್ರ ಬಾಯಲ್ಲಿ ನೀರು ತರಿಸುತ್ತದೆ.
ಕ್ಯಾರೆಟ್ ತುರಿದು ಮಾಡುವ ಈ ಹೋಳಿಗೆಯು ಅದ್ಭುತ ರುಚಿ ನೀಡಲಿದೆ. ಕ್ಯಾರೆಟ್ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕೆಂದರೆ ಮೈದಾ ಹಿಟ್ಟು, ಕೊಬ್ಬರಿ ತುರಿ, ಎಣ್ಣೆ, ಚಿರೋಟಿ ರವೆ, ಅರಿಶಿಣ, ತುಪ್ಪ, ಏಲಕ್ಕಿ ಪುಡಿ ಮತ್ತು ಸಕ್ಕರೆ
ಕ್ಯಾರೆಟ್ ಹೋಳಿಗೆ ಮಾಡುವ ವಿಧಾನವೆಂದರೆ:
ಮೊದಲು ಒಂದು ಪಾತ್ರೆಗೆ ಮೈದಾ ಹಿಟ್ಟು ಜರಡಿ ಹಿಡಿದು 2 ಕಪ್‌ನಷ್ಟು ಹಾಕಿಕೊಳ್ಳಿ. ಇದಕ್ಕೆ ಅದೇ ಕಪ್‌ನಲ್ಲಿ ಅರ್ಧ ಕಪ್ ಚಿರೋಟಿ ರವೆ, ಸ್ವಲ್ಪ ಅರಶಿಣ ಪುಡಿ ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ನಾದಿಕೊಳ್ಳಬೇಕು. ಮಧ್ಯದಲ್ಲಿ ಎಣ್ಣೆ ಸೇರಿಸಿಕೊಂಡು ಚಪಾತಿ ಹಿಟ್ಟಿನಂತೆ ಹದ ಮಾಡಿಕೊಳ್ಳಿ. ನಂತರ ಹಿಟ್ಟಿನ ಮೇಲೆ ಎಣ್ಣೆ ಸವರಿ 1 ಗಂಟೆ ಹಿಟ್ಟಿನ ಮೇಲೆ ಒದ್ದೆಯಾದ ಕಾಟನ್ ಬಟ್ಟೆ ಮುಚ್ಚಿ ಇಡಬೇಕು. ಈಗ 4 ಕಪ್ ಕ್ಯಾರೆಟ್ ತುರಿ ತೆಗೆದುಕೊಳ್ಳಿ. ಈ ತುರಿಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ನುಣ್ಣಗೆ ಮೃದುವಾಗಿ ಇದು ಬರಬೇಕು. ಹಾಗೆ 1 ಕಪ್ ಕೊಬ್ಬರಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಳಿಕ ರುಬ್ಬಿದ ಕ್ಯಾರೆಟ್ ಹಾಕಿ 5 ನಿಮಿಷ ಹುರಿದುಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಕೂಡ ಹಾಕಿಕೊಂಡು ಚೆನ್ನಾಗಿ ಕರಗುವಂತೆ ತಿರುಗಿಸಿಕೊಳ್ಳಿ. ಈ ಕ್ಯಾರೆಟ್ ಹಾಗೂ ಸಕ್ಕರೆ ಸ್ವಲ್ಪ ಗಟ್ಟಿಯಾಗಬೇಕು, ಈಗ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದೇ ವೇಳೆ ಏಲಕ್ಕಿ ಪುಡಿ ಸೇರಿಸಿ ಹುರಿದುಕೊಳ್ಳಿ.
ನಿಧಾನವಾಗಿ ಈ ಹೂರ್ಣ ಗಟ್ಟಿಯಾಗಬೇಕು. 15 ನಿಮಿಷ ಆದರೂ ಕಾಯಿಸಿಕೊಳ್ಳಿ. ಇದು ಉಂಡೆ ಕಟ್ಟಲು ಬರುವಂತೆ ಹದವಾಗಬೇಕು. ಈಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಹೂರ್ಣ ಮಾಡಿಕೊಂಡು ಒಂದು ತಟ್ಟೆಗೆ ಹಾಕಿಡಿ. ಈಗ ಮೊದಲು ಹದ ಮಾಡಿರುವ ಹಿಟ್ಟನ್ನು ಮತ್ತೆ ಒಂದು ಸುತ್ತು ಹದ ಮಾಡಿ ಮತ್ತೆ ಉಂಡೆ ಕಟ್ಟಿಕೊಳ್ಳಿ.
ಈ ಉಂಡೆಯನ್ನು ಪೂರಿಯಂತೆ ದಪ್ಪವಾಗಿ ಲಟ್ಟಿಸಿ ಮತ್ತೆ ಮಧ್ಯದಲ್ಲಿ ಹೂರ್ಣ ಇಟ್ಟು ಚೆನ್ನಾಗಿ ಪ್ಯಾಕ್ ಮಾಡಿಕೊಳ್ಳಿ. ಅನಂತರ ಪ್ಲಾಸ್ಟಿಕ್ ಮೇಲೆ ಹಾಕಿಕೊಂಡು ಲಟ್ಟಿಸಿಕೊಳ್ಳಿ. ನಂತರ ಕಾವಲಿ ಮೇಲೆ ಎರಡೂ ಕಡೆಗಳಲ್ಲಿ ಚೆನ್ನಾಗಿ ಕಾಯಿಸಿಕೊಳ್ಳಿ. ಇಷ್ಟಾದರೆ ರುಚಿ ರುಚಿಯ ಕ್ಯಾರೆಟ್ ಹೋಳಿಗೆ ಸಿದ್ದವಾಗುತ್ತದೆ.