ಶಿರಾ :
ವರ್ಷಕ್ಕೊಮ್ಮೆ ಬರುವ ಯುಗಾದಿ ಹಬ್ಬದ ಆಚರಣೆಗಾಗಿ ತಯಾರಿ ನಡೆಸಿದ್ದ ಕುಟುಂಬವೊಂದು ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಲುಕಿ ಶೋಕಾಚರಣೆ ಮಾಡುವ ಸ್ಥಿತಿಗೆ ಒಳಗಾದ ಘಟನೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಗೆಗೆ ಗುಡಿಸಲು ಸುಟ್ಟು ಕರಕಲಾಗಿದ್ದು, ಬಡ ಕುಟುಂಬ ಬೀದಿಗೆ ಬಿದ್ದಿದೆ.
ಹುಣಸೆಕಟ್ಟೆ ಗ್ರಾಮದ ಭೋವಿ ಜನಾಂಗದ ರತ್ನಮ್ಮ ಎಂಬುವವರಿಗೆ ಸೇರಿದ ಗುಡಿಸಲಿಗೆ ಮಧ್ಯರಾತ್ರಿ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಅನಾಹುತದಿಂದಾಗಿ ಗುಡಿಸಲಿನಲ್ಲಿ ಕಟ್ಟಿ ಹಾಕಿದ್ದ ಎರಡು ಹಸುಗಳು, ಒಂದು ಕರು, ಎರಡು ಕುರಿಗಳು ಹಾಗೂ ನಾಲ್ಕು ಮೇಕೆಗಳು ಸ್ಥಳದಲ್ಲಿಯೇ ಸಜೀವ ದಹನವಾಗಿದೆ. ಅಲ್ದೇ ಗುಡಿಸಲಿನಲ್ಲಿದ್ದ ಬಟ್ಟೆ ಬರೆ, ಧವಸ ಧಾನ್ಯಗಳು ಬೆಂಕಿಯ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದೆ. ಊರಿನಿಂದ 2 ಕಿ.ಮೀ ದೂರದಲ್ಲಿರುವ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ರತ್ನಮ್ಮ ಎಂಬುವವರು ತನ್ನ ಎರಡು ಮಕ್ಕಳ ಜೊತೆ ಜೀವನ ನಡೆಸ್ತಾ ಇತ್ತು. ಆದ್ರೀಗ ಅಗ್ನಿಯ ಅವಘಡದಿಂದಾಗಿ ಈ ಕುಟುಂಬ ಬೀದಿಗೆ ಬಿದ್ದಿದೆ.
ಇನ್ನು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನುಗ್ರಹ ಯೋಜನೆಯಡಿಯಲ್ಲಿ ಸರ್ಕಾರದಿಂದ ದೊರೆಯುವ ಪರಿಹಾರ ಮೊತ್ತವನ್ನು ಶೀಘ್ರದಲ್ಲಿಯೇ ವಿತರಿಸುವ ಭರವಸೆಯನ್ನು ನೀಡಿದ್ದಾರೆ. ಜೆಡಿಎಸ್ ಮುಖಂಡರಾದ ಎಚ್.ಜೆ.ಸತ್ಯನಾರಾಯಣ ಅವರು ಈ ಬಡಕುಟುಂಬಕ್ಕೆ ಧನಸಹಾಯ ಮಾಡಿದ್ದು, ತಾತ್ಕಾಲಿಕವಾಗಿ ವಾಸ ಮಾಡಲು ಟಾರ್ ಪಾಲ್, ಅಡಿಗೆ ಸ್ಟೋವ್, ಸಿಲಿಂಡರ್ ಮತ್ತು ಧವಸ ಧಾನ್ಯವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.