ಗುಬ್ಬಿ :
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಬೇಕಾದರೆ ಇರ್ತಾರೆ, ಆದರೆ ಕೆಟ್ಟ ತಾಯಿ ಎಂದಿಗೂ ಇರೋದಿಲ್ಲ. ತನ್ನ ಸರ್ವಸ್ವವನ್ನು ತನ್ನ ಮಕ್ಕಳಿಗೆ ಅರ್ಪಿಸುವ ತ್ಯಾಗಮಯಿ ಅಂದರೆ ಅದು ತಾಯಿ. ತನ್ನ ಪ್ರಾಣವನ್ನು ಪಣಕ್ಕೆ ಇಟ್ಟು ಬೇಕಾದರೆ ಮಕ್ಕಳ ಪ್ರಾಣ ಉಳಿಸುವ ಮಹಾ ತಾಯಿ. ಆದರೆ ಇಲ್ಲೊಬ್ಬ ಪಾಪಿ ತಾಯಿ ತಾನು ಹೆತ್ತ ಮಗಳನ್ನು ಕಪಾಳಕ್ಕೆ ಹೊಡೆದು, ಬಸ್ ಸ್ಟ್ಯಾಂಡ್‌ನಲ್ಲೇ ಬಿಟ್ಟು ಹೋಗಿರೋ ಅಮಾನವೀಯ ಘಟನೆ ಗುಬ್ಬಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಿಪಟೂರು ಮೂಲದ ಸೌಮ್ಯ ಎಂಬ ಮಹಾತಾಯಿ ಹಬ್ಬಕ್ಕೆಂದು ಗುಬ್ಬಿ ಪಟ್ಟಣಲ್ಲಿದ್ದ ಸಂಬಂಧಿಕರ ಮನೆಗೆ ಮಗಳೊಂದಿಗೆ ಬಂದಿದ್ದರು. ಹಬ್ಬ ಮುಗಿದ ಬಳಿಕ ಇಂದು ಊರಿಗೆ ವಾಪಸ್ ಹೋಗುವಾಗ ಮಗಳ ಕಪಾಳಕ್ಕೆ ಹೊಡೆದು, ನೀನು ನನ್ನ ಜೊತೆ ಬರಬೇಡ, ಎಲ್ಲಿಗಾದ್ರು ಹೊರಟು ಹೋಗು ಅಂತಾ ಬೈದು ಬಸ್ ಹತ್ತುತ್ತಿದ್ದ ಮಗಳನ್ನು ದೂಕಿ ಹೋಗಿರೋ ಹೃದಯವಿದ್ರಾವಕ ಘಟನೆ ನಡೆದಿದೆ.
ಪಾಪಿ ತಾಯಿ ಸೌಮ್ಯ ಮಗಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದರಿಂದ ಗಾಬರಿಯಾದ ಸುಮಾರು 10 ರಿಂದ 11 ವರ್ಷದ ಬಾಲಕಿ ಬಸ್ ನಿಲ್ದಾಣದಲ್ಲಿ ಅಳುತ್ತಾ ಕುಳಿತ್ತಿದ್ದಳು. ಮೊದಲೇ ತಂದೆ ಇಲ್ಲದ ಪುಟ್ಟ ಹುಡುಗಿ ದಿಕ್ಕು ತೋಚದೇ ಗಾಬರಿಯಲ್ಲಿ ಬಸ್ ಸ್ಟ್ಯಾಂಡ್‌ನ ಮೂಲೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಇದನ್ನು ಗಮನಿಸಿದ ಪ್ರಯಾಣಿಕರು ಬಾಲಕಿಗೆ ನೀರು ಕುಡಿಸಿ, ಧೈರ್ಯ ನೀಡಿ, ಸಮಾಧಾನ ಮಾಡಿದ್ದಾರೆ. ಬಳಿಕ ಮಗುವಿನ ಬಳಿ ವಿಳಾಸ ಪಡೆದು ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಗಿದೆ.
ಅದೇನೇ ಇರಲಿ ಹೆತ್ತ ತಾಯಿ ತನ್ನ ಮಗುವನ್ನು ಒಂಟಿಯಾಗಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಲು ಅವಳಿಗೆ ಮನಸ್ಸಾದರೂ ಹೇಗೆ ಬಂತು. ಆಕೆ ನಿಜಕ್ಕೂ ಆ ಮಗುವಿನ ಹೆತ್ತ ತಾಯಿ ನಾ, ಸಮಾಜದಲ್ಲಿ ಇಂತಹ ತಾಯಂದಿರು ಇದ್ದಾರಾ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.