ಕ್ರಿಕೆಟ್ :
ಪಿಂಕ್ ಸಿಟಿ ಅಂತಲೇ ಕರೆಸಿಕೊಳ್ಳೋ ಜೈಪುರ ನಿನ್ನೆ ಮತ್ತಷ್ಟು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಒಂದು ಕಡೆ ಜೈಪುರದ ಅಂಗಳದಲ್ಲಿ ಸಿಕ್ಸರ್, ಬೌಂಡರಿಗಳ ಮಳೆ ಸುರಿಯುತ್ತಿದ್ರೆ, ಇನ್ನೊಂದು ಕಡೆ ಗುಲಾಬಿ ಜೆರ್ಸಿ ತೊಟ್ಟ ಸಾವಿರಾರು ಅಭಿಮಾನಿಗಳು ಅದೊಂದು ಹೆಸರನ್ನ ಕೂಗಿ ಕೂಗಿ ಚಿಯರ್ ಅಪ್ ಮಾಡ್ತಾ ಇದ್ರು. ಆ 14ರ ಪೋರನ ಕ್ರಿಕೆಟ್‌ವೈಭವವನ್ನ ಕಣ್ತುಂಬಿಕೊಂಡು ಹುಚ್ಚೆದ್ದು ಕುಣಿಯೋದಕ್ಕೆ ಆರಂಭಿಸಿಬಿಟ್ಟಿದ್ದರು.
ಆ 14ರ ಹುಡುಗ ಬೇರಾರೂ ಅಲ್ಲ..ವೈಭವ್ ಸೂರ್ಯವಂಶಿ..ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಅಸಾಮಾನ್ಯ ಪ್ರತಿಭೆಯ ಬಾಲಕ..ವಾವ್ಹ್..ಅದೇನು ಆಟ, ಅದೇನು ಹೊಡೆತ..ವಿಶ್ವ ದರ್ಜೆಯ ಬೌಲರ್‌ಗಳನ್ನ ಕೆಣಕುವಂತಹ ಪ್ರದರ್ಶನ ನೀಡಿದ ಈ ಬಾಲಕ ಶತಕ ಅನ್ನೋ ಶಿಖರವನ್ನೇರಿ ಸಂಭ್ರಮಿಸಿಬಿಟ್ಟಿದ್ದ.
ನಿನ್ನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯ ಆಟದ ಪರಿಯೇ ಹಾಗಿತ್ತು. ಸವಾಯಿ ಮಾನ್‌ಸಿಂಗ್ ಅಂಗಳದಲ್ಲಿ ಈತ ಕ್ರಿಕೆಟ್ ಆಡಲಿಲ್ಲ. ಬದಲಾಗಿ ತನ್ನ ಬ್ಯಾಟ್‌ನಿಂದ ಬೌಂಡರಿ, ಸಿಕ್ಸರ್ ಗಳ ಮಳೆಯನ್ನೇ ಸುರಿಸಿಬಿಟ್ಟ. ೧೪೦ರ ವೇಗದಲ್ಲಿ ಬರ್ತಿದ್ದ ಚೆಂಡುಗಳನ್ನ ಈ ಪೋರ ಅನಾಯಾಸವಾಗಿ ಬೌಂಡರಿ ಗೆರೆಯ ಆಚೆ ಕಳುಹಿಸುತ್ತಿದ್ರೆ, ಎದುರಾಳಿಗಳು ಕೂಡ ಈತನ ಹೊಡೆತವನ್ನ ನೋಡಿ ಶಹಬ್ಬಾಷ್ ಅಂದುಬಿಟ್ಟಿದ್ರು. ಪೆವಿಲಿಯನ್‌ನಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಂತೂ ಬಾಯಿ ಮೇಲೆ ಬೆರಳಿಟ್ಟುಕೊಂಡುಬಿಟ್ಟಿದ್ರು. ಇನ್ನು ಈ ಬಾಲಕನ ಬ್ಯಾಟ್‌ನಿಂದ ಸಿಡಿಯುತ್ತಿದ್ದ ಚೆಂಡುಗಳು ಗಗನವನ್ನೇ ಚುಂಬಿಸಿ ಕೆಳಗೆ ಬರ್ತಿದ್ರೆ, ನಕ್ಷತ್ರವೇ ಧರೆಗಿಳಿದು ಬರ್ತಿರುವಂತೆ ಕಾಣಿಸುತ್ತಿತ್ತು.
ಗುಜರಾತ್ ಟೈಟಾನ್ಸ್ ನೀಡಿದ 210 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡದ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅಬ್ಬರದ ಆಟಕ್ಕೆ ಮುಂದಾದ್ರು. ಜಿಟಿ ಪಡೆಯ ಬೌಲರ್‌ಗಳನ್ನ ಬೆಂಡೆತ್ತೋಕೆ ಮುಂದಾದ್ರು. ಈ ವೇಳೆ ಅಬ್ಬರಿಸಿ ಬೊಬ್ಬರಿದಿದ್ದು ಈ ವೈಭವ್ ಸೂರ್ಯವಂಶಿ. ಯಾವ ಬೌಲರ್‌ಗಳನ್ನೂ ಬಿಡದೇ ದಂಡಿಸಿದ ವೈಭವ್ ಸೂರ್ಯವಂಶಿ, ಕೇವಲ ೩೫ ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕವನ್ನ ಪೂರೈಸಿ ಸಂಭ್ರಮಿಸಿದ್ರು. 38 ಎಸೆತಗಳಲ್ಲಿ 101 ರನ್ ಗಳಿಸಿ ಔಟಾದ್ರು. 14 ವರ್ಷದ ಹುಡುಗನ ಈ ಆಟಕ್ಕೆ ಇಡೀ ವಿಶ್ವವೇ ಬೆರಗಾಗಿ ಹೋಗಿದೆ.
ಇನ್ನು 14 ವರ್ಷದ ವೈಭವ್ ಆಟ ವೈಭವವನ್ನ ನೋಡಿ ದಿಗ್ಗಜ ಕ್ರಿಕೆಟಿಗರೇ ಉಘೇ ಉಘೇ ಎಂದಿದ್ದಾರೆ. ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಸೇರಿದಂತೆ ದಿಗ್ಗಜ ಆಟಗಾರರು ಸೂರ್ಯವಂಶಿಯನ್ನ ಕೊಂಡಾಡಿದ್ದಾರೆ. ರಾಹುಲ್ ದ್ರಾವಿಡ್ ಅಂತೂ ವೀಲ್ ಚೇರ್ ನಿಂದ ಎದ್ದು ತನ್ನ ಶಿಷ್ಯನ ಶತಕವನ್ನ ಸಂಭ್ರಮಿಸಿದ್ದಾರೆ.
ಅದೇನೆ ಇರಲಿ..ವೈಭವ್ ಸೂರ್ಯವಂಶಿ ತನ್ನ ಈ ಶತಕದಾಟದೊಂದಿಗೆ ಇಡೀ ಕ್ರಿಕೆಟ್ ಜಗತ್ತಿಗೆ ತನ್ನ ತಾಕತ್ತೇನು ಅನ್ನೋದನ್ನ ತೋರಿಸಿಕೊಟ್ಟಿದ್ದಾನೆ. ಮುಂದಿನ ೨೦ ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನ ಅನಭೀಷಕ್ತ ದೊರೆ ನಾನೇ ಅನ್ನೋ ಸಂದೇಶವನ್ನ ನೀಡಿದ್ದಾನೆ.