GUBBI: ಇರಕಸಂದ್ರ ಗ್ರಾಪಂ ಅಧ್ಯಕ್ಷರಾಗಿ ಸಿದ್ದರಾಜು, ಉಪಾಧ್ಯಕ್ಷರಾಗಿ ಲತಾಕುಮಾರಿ ಆಯ್ಕೆ

ಗುಬ್ಬಿ: 

ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಇರಕಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿದ್ದರಾಜು ಅಧ್ಯಕ್ಷರಾಗಿ ಮತ್ತು ಲತಾಕುಮಾರಿ  ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಪಂಚಾಯಿತಿ ಕಚೇರಿಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಶಿವಪ್ರಕಾಶ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.  ಈ ಹಿಂದೆ ಅಧ್ಯಕ್ಷರಾಗಿದ್ದ ಪುಟ್ಟರಾಜು ಹಾಗೂ ಉಪಾಧ್ಯಕ್ಷರಾಗಿದ್ದ ಚೈತ್ರಾ ಅವರು ರಾಜೀನಾಮೆ ಕೊಟ್ಟ ಹಿನ್ನಲೆ ಚುನಾವಣೆ ನಡೆಸಲಾಯಿತು.

ಇನ್ನು ಅಧ್ಯಕ್ಷ ಸ್ಥಾನ ಹಾಗೂ ಹಿಂದುಳಿದ ವರ್ಗ(ಅ) ಮಹಿಳಾ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿದ್ಧ ಸಿದ್ದರಾಜು ಅಧ್ಯಕ್ಷರಾಗಿ, ಲತಾಕುಮಾರಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ಇನ್ನು ನೂತನ ಅಧ್ಯಕ್ಷ ಪುಟ್ಟರಾಜು ಮಾತನಾಡಿ ಪ್ರಮುಖ ವ್ಯಾಪಾರಿ ಕೇಂದ್ರ ಚೇಳೂರು ಸಮೀಪದ ಇರಕಸಂದ್ರ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಶಾಸಕ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಸರ್ಕಾರದಿಂದ ಅನುದಾನ ತಂದು ಕೆಲಸ ಮಾಡಿ ಅಭಿವೃದ್ದಿ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನೂತನ ಉಪಾಧ್ಯಕ್ಷೆ ಲತಾಕುಮಾರಿ ಮಾತನಾಡಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಅವಶ್ಯ ಸೌಕರ್ಯ ಒದಗಿಸುತ್ತೇವೆ. ಆದಾಯದ ಮೂಲ ಹೆಚ್ಚಿಸಿ ತೆರಿಗೆ ಹಣದಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ, ಕುಡಿಯುವ ನೀರಿನ ಘಟಕ, ರಸ್ತೆ ಚರಂಡಿ ಹೀಗೆ ಅನೇಕ ಸವಲತ್ತು ಒದಗಿಸಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಮಾರ್ಪಾಡು ಮಾಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಐ.ಜಿ.ಲಿಂಗರಾಜು, ಬಿದರೆ ಯತೀಶ್, ಕೃಷ್ಣೋಜಿರಾವ್, ಶಿವಾಜಿರಾವ್, ಹನುಮಂತಪ್ಪ, ನಾಗರಾಜು, ದಯಾನಂದಗೌಡ, ಮೈಲಾರಿ ಪಿಡಿಓ ಶ್ಯಾಮಲ ಸೇರಿದಂತೆ ಎಲ್ಲಾ ಗ್ರಾಪಂ ಸದಸ್ಯರು ಇತರರು ಇದ್ದರು.

 

Author:

...
Keerthana J

Copy Editor

prajashakthi tv

share
No Reviews