ಶಿರಾ:
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಚಂಗಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಕೆ ಪಾಳ್ಯ ಗ್ರಾಮದಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ, ಈ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಇಲ್ಲಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅಲ್ಲದೇ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸ್ವಚ್ಛತೆ ಪದದ ಅರ್ಥವೇ ಗೊತ್ತಿಲ್ಲದ ಹಾಗೆ ವರ್ತಿಸುತ್ತಿದ್ದು ಜನರ ಜೀವದ ಜೊತೆ ಆಟವಾಡ್ತಿದ್ದಾರೆ. ಇದರಿಂದ ಇಲ್ಲಿನ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಅಕ್ರೋಶದ ಕಟ್ಟೆ ಹೊಡೆದಿದೆ.
ಇನ್ನು ಕೆ.ಕೆ ಪಾಳ್ಯದ ಗ್ರಾಮದಲ್ಲಿರೋ ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದು, ಸೊಳ್ಳೆಗಳ ಉತ್ಪತ್ತಿಗೆ ರಹದಾರಿಯಾಗಿದೆ. ಇದರಿಂದ ಗ್ರಾಮಸ್ಥರು ಅದ್ಯಾವ ಅನಾರೋಗ್ಯಕ್ಕೆ ತುತ್ತಾಗುತ್ತಾರೋ ಆ ದೇವರೇ ಬಲ್ಲ. ಹೀಗಾಗಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮೂಲಸೌಕರ್ಯದ ಬಗ್ಗೆ, ಸ್ವಚ್ಛತೆ ಬಗ್ಗೆ ಅದೆಷ್ಟೋ ಬಾರಿ ಮನವಿ ಮಾಡಿದರು ಕ್ಯಾರೆ ಅಂತಿಲ್ವಂತೆ, ಅಷ್ಟೇ ಅಲ್ಲ ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಕೂಡ ವರದಿ ಮಾಡಿತ್ತು, ಆದರೆ ಅಧಿಕಾರಿಗಳು ಮಾತ್ರ ಜುಂ ಅಂತಿಲ್ಲ. ಹೀಗಾಗಿ ಗ್ರಾಮಸ್ಥರೇ ಸ್ವಚ್ಚತೆ ಮಾಡಲು ಮುಂದಾಗಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಅಂಗನವಾಡಿ ಕೇಂದ್ರ, ಶಾಲಾ ಆವರಣ ಸೇರಿದಂತೆ ಗ್ರಾಮದ ಹಲವೆಡೆ ಗ್ರಾಮಸ್ಥರೇ ಸ್ವಚ್ಚತೆ ಮಾಡಿದ್ದು, ಅಧಿಕಾರಿಗಳು ತಲೆ ತಗ್ಗಿಸುವಂತೆ ಮಾಡಿದೆ.
ಇನ್ನಾದರೂ ಗ್ರಾಮಸ್ಥರ ಕೆಲಸದಿಂದಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ವಚ್ಛತೆ ಬಗ್ಗೆ ಗಮನ ಹರಿಸ್ತಾರಾ ಇಲ್ಲವಾ ಎಂದು ಕಾದುನೋಡಬೇಕಿದೆ.