ಶಿರಾ :
ನಮ್ಮ ದೇಶವನ್ನು ಸ್ವಚ್ಛ ಮತ್ತು ಸುಂದರವಾಗಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿ ಕೋಟಿ ಕೋಟಿ ಹಣವನ್ನು ಕೂಡ ವ್ಯಯಿಸುತ್ತಿದೆ. ಆದರೆ ಇದನ್ನು ಅನುಷ್ಠಾನ ಮಾಡಬೇಕಾಗಿರೋರು ಕೈಕಟ್ಟಿ ಕೂತರೆ ಮಾತ್ರ ಇದೆಲ್ಲವೂ ವೇಸ್ಟ್ ಆಗಿಬಿಡುತ್ತೆ. ಜನರು ಮತ್ತೆ ಕೊಳಕಿನಲ್ಲಿಯೇ ಜೀವನ ನಡೆಸಬೇಕಾಗುತ್ತೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹೊಸೂರು ಗ್ರಾಮ ಪಂಚಾಯ್ತಿ ಜನರದ್ದು ಕೂಡ ಇದೇ ಪರಿಸ್ಥಿತಿ.
ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಅನ್ನೋದೇ ಮರೀಚಿಕೆಯಾಗಿ ಬಿಟ್ಟಿದೆ. ಇಲ್ಲಿ ಹೆಸರಿಗಷ್ಟೇ ಗ್ರಾಮ ಪಂಚಾಯ್ತಿ ಇದೆ. ಆದರೆ ಏನೂ ಕೆಲಸ ಆಗ್ತಿಲ್ಲ ಅನ್ನೋದು ಇಲ್ಲಿನ ಗ್ರಾಮಸ್ಥರು ಮಾಡ್ತಿರೋ ಆರೋಪ. ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೊಳಚೆ ನೀರು ತುಂಬಿದೆ. ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿ ನಿಂತಿವೆ. ಹೀಗಾಗಿ ಚರಂಡಿಗಳಲ್ಲಿ ನೀರು ನಿಂತುಕೊಳ್ಳುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗ್ತಿವೆ. ಜಾನುವಾರುಗಳು ಕೂಡ ಕಲುಷಿತ ನೀರನ್ನೇ ಕುಡಿಯುವಂತಾಗಿದೆಯಂತೆ. ಹೀಗಾಗಿ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.
ಹೊಸೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಕುಂಬಾರಹಳ್ಳಿ, ಕೆ.ರಂಗನಹಳ್ಳಿ, ಭೂತಪ್ಪನ ಗುಡಿ ಸೇರಿದಂತೆ ಇನ್ನು ಕೆಲವು ಗ್ರಾಮಗಳು ಸೇರುತ್ತವೆ. ಆದರೆ ಯಾವ ಹಳ್ಳಿಗಳಲ್ಲಿಯೂ ಸ್ವಚ್ಛತಾ ಕಾರ್ಯವನ್ನೇ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಎಲ್ಲೆಂದರಲ್ಲಿ ಕೊಳಕು, ಚರಂಡಿ ನೀರು, ಕಸ- ಕಡ್ಡಿಗಳೇ ತುಂಬಿಕೊಂಡಿವೆ. ಆದರೆ ಪಂಚಾಯ್ತಿ ಅಧಿಕಾರಿಗಳು ಮಾತ್ರ ಇದೆಲ್ಲಾ ಕಂಡೂ ಕಾಣದಂತೆ ಇದ್ದಾರಂತೆ.
ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡಿ ಅಂತಾ ಕೇಳಿದರೆ ಅಧಿಕಾರಿಗಳು ಸಾರ್ವಜನಿಕರ ಜೊತೆಯೇ ವಾದ ಮಾಡುತ್ತಾರಂತೆ. ಪಂಚಾಯ್ತಿಯ ಸ್ವಚ್ಛತಾ ಕಾರ್ಮಿಕರು ಪ್ರಮುಖ ರಸ್ತೆಗಳಲ್ಲಿ ಮಾತ್ರ ಸ್ವಚ್ಛತೆ ಮಾಡುತ್ತಿದ್ದು. ಉಳಿದ ರಸ್ತೆಗಳ ಕಡೆ ಕಸ ತುಂಬುವ ವಾಹನಗಳು ಕೂಡ ಸುಳಿಯುವುದಿಲ್ಲವಂತೆ. ಇದರಿಂದ ಗ್ರಾಮಗಳಲ್ಲಿ ಚರಂಡಿಗಳು ಕಟ್ಟಿಕೊಂಡಿದೆ. ಕೆಲವು ಗ್ರಾಮಗಳ ಜನರಂತೂ ಇದುವರೆಗೂ ಕಸ ಸಂಗ್ರಹಣಾ ವಾಹನವನ್ನೇ ನೋಡಿಲ್ಲ ಎನ್ನುತ್ತಿದ್ದಾರೆ. ಹೊಸೂರು ಅಂತಿದ್ದ ನಮ್ಮೂರನ್ನು ಈ ಅಧಿಕಾರಿಗಳು ಹೊಲಸೂರು ಮಾಡಿಬಿಟ್ಟಿದ್ದಾರೆ ಸರ್ ಅಂತಾ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಹಳ್ಳಿಗಳಲ್ಲಿ ಮಾತ್ರವಲ್ಲ. ಗ್ರಾಮ ಪಂಚಾಯ್ತಿ ಆವರಣದಲ್ಲಿಯೂ ಸ್ವಚ್ಚತೆ ಮರೀಚಿಕೆಯಾಗಿದೆ. ಪಂಚಾಯ್ತಿ ಆವರಣದಲ್ಲಿಯೂ ಕಸ ಕಡ್ಡಿ ತುಂಬಿಕೊಂಡಿದ್ದು, ಪಂಚಾಯ್ತಿ ಕಚೇರಿಯೋ ಅಥವಾ ಯಾವುದೋ ಗೋದಾಮೋ ಅನ್ನೋದು ಗೊತ್ತಾಗದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇನ್ನು ಈ ಬಗ್ಗೆ ಪ್ರಶ್ನೆ ಮಾಡಲು ಅಂತಾ ಹೋದರೆ ಕಚೇರಿಯಲ್ಲಿ ಯಾರೊಬ್ಬರೂ ಇರ್ಲೇ ಇಲ್ಲ. ಇನ್ನು ಮೇಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮದ ಸ್ವಚ್ಛತೆಯ ಸಮಸ್ಯೆಯ ಪರಿಹಾರ ನೀಡಬೇಕಿದೆ.