ಶಿರಾ :
ಶಿರಾ ತಾಲ್ಲೂಕಿನ ಮೆಲ್ಕುಂಟೆ ಶ್ರೀ ಬಾಲಕೃಷ್ಣ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ಶ್ರೀ ನವನೀತ ಬಾಲಕೃಷ್ಣ ಸ್ವಾಮಿಗೆ ವಿಶೇಷವಾಗಿ ಅಲಂಕಾರ ಮಾಡಿ ಭಕ್ತರು ಸಂಭ್ರಮಿಸಿದರು. ಇದೇ ವೇಳೆ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ.ಜಯಚಂದ್ರ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ನಿರ್ಮಾಣ ಮಾಡಿರುವ ನೂತನ ಶೌಚಾಲಯ ಮತ್ತು ಸ್ನಾನ ಗೃಹ ಸಂಕೀರ್ಣವನ್ನು ಉದ್ಘಾಟಿಸಿದರು.
ದೇವಾಲಯದ ಪ್ರಧಾನ ಅರ್ಚಕ ಎಸ್.ಆರ್ ಚಕ್ರಪಾಣಿ, ನವನೀತ ಬಾಲಕೃಷ್ಣ ಟ್ರಸ್ಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಶ್ರದ್ದಾ ಭಕ್ತಿಯಿಂದ ನಡೆದವು. ಇನ್ನು ಮುಂಜಾನೆಯಿಂದಲೇ ಕುಂಭಾಭಿಷೇಕ ಸೇರಿದಂತೆ ಕಳಶ ಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ ನಡೆಸಲಾಯಿತು. ಅಲ್ದೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಈ ವೇಳೆ ಶಾಸಕ ಟಿಬಿ ಜಯಚಂದ್ರ ಅವರು ಸ್ನಾಹ ಗೃಹ ಮತ್ತು ನೂತನ ಶೌಚಲಯವನ್ನು ಉದ್ಘಾಟಿಸಿದ ನಂತರ ಬಾಲಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಹಾಪೂಜೆಯ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ದೇವಾಲಯಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು.