ಶಿರಾ : ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಆ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಜನ ರೋಗಿಗಳು ಬರ್ತಾರೆ. ಆದರೆ ರೋಗಿಗಳನ್ನು ನೋಡಲು ವೈದ್ಯರಿರುವುದಿಲ್ಲ, ಎಲ್ಲಾ ಕಾಯಿಲೆಗೂ ನರ್ಸ್‌ಗಳೇ ಚಿಕಿತ್ಸೆ ಕೊಡ್ತಾರೆ. ಸುತ್ತ ಮುತ್ತಲಿನ 10 ಗ್ರಾಮಗಳಿಗೆ ಇದೊಂದೆ ಆಸ್ಪತ್ರೆ ಇರೋದು. ಆರೋಗ್ಯ ಸಮಸ್ಯೆಯಾದರೆ ನೋಡಲು ವೈದ್ಯರಿಲ್ಲ ಅಂತಾ ಜನರು ಕಂಗಾಲಾಗಿದ್ದಾರೆ.
ಇಲ್ಲಿ ಎಲ್ಲಾ ಸೌಕರ್ಯಗಳು ಇರುವಂತೆ ಸುಸಜ್ಜಿತವಾಗಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆದರೆ ವೈದ್ಯರಿಲ್ಲದೆ ಸರಿಯಾದ ಚಿಕಿತ್ಸೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಇನ್ನು ಮದಲೂರು ಹೇಳಿಕೇಳಿ ಗಡಿ ಭಾಗ. ಇಲ್ಲಿಗೆ ಆಂಧ್ರಪ್ರದೇಶದ ರೋಗಿಗಳು ಕೂಡ ಚಿಕಿತ್ಸೆಗೆಂದು ಬರುತ್ತಾರಂತೆ. ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹೈಟೆಕ್ ಆಸ್ಪತ್ರೆ ಇದೆ ಸಮಯಕ್ಕೆ ಸರಿಯಾಗಿ ವೈದ್ಯರಿಲ್ಲ. ಏನೇ ತೊಂದರೆ ಆದರೂ ಕೂಡ ನರ್ಸ್‌ಗಳೇ ನೋಡ್ತಾರೆ. 50 ಕ್ಕೂ ಹೆಚ್ಚು ಪೇಷಂಟ್ ಬಂದರು ನೋಡೋರಿಲ್ಲ ಸರ್ ಏನು ಮಾಡೋದು ಅಂತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಮದಲೂರು ಆಸ್ಪತ್ರೆಯ ಸಮಸ್ಯೆಯನ್ನು ಕುರಿತು ತಾಲೂಕು ವೈದ್ಯಾಧಿಕಾರಿ ಡಾ.ಸಿದ್ದೇಶ್ವರ್ ಮಾತನಾಡಿ, ಶಿರಾದಲ್ಲಿ ಒಟ್ಟು 16 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಮದಲೂರಿನಲ್ಲಿ ಕೆಲಸ ಮಾಡುತ್ತಿರುವ ಡಾ.ಸತೀಶ್ ಅವರು 1 ತಿಂಗಳು ಕಾಲ ರಜೆಯನ್ನು ತೆಗೆದುಕೊಂಡಿದ್ದಾರೆ. ಮದಲೂರಿನಂತೆ ಗೋಮಾರ್ದನಹಳ್ಳಿಯಲ್ಲಿಯೂ ಸದ್ಯಕ್ಕೆ ಡಾಕ್ಟರ್ ಇಲ್ಲ. ಹಾಗಾಗಿ ನಮ್ಮ ತಾಲೂಕು ವೈದ್ಯಾಧಿಕಾರಿಗಳನ್ನು ಎರಡು ಕಡೆ ಕೆಲಸ ಮಾಡಲು ಸೂಚಿಸಿದ್ದೇನೆ ಎಂದಿದ್ದಾರೆ.
ಇನ್ನು ಈ ವ್ಯಾಪ್ತಿಯಲ್ಲಿ ಇದೊಂದೆ ಹೆರಿಗೆ ಆಸ್ಪತ್ರೆ ಇರೋದು, ಮದಲೂರಿನ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದೆ ಜ್ವರ, ನೆಗಡಿಯೆಂದು ಬಂದರೆ ನರ್ಸ್ ಪ್ರಾಥಮಿಕ ಚಿಕಿತ್ಸೆ ಕೊಡ್ತಾರೆ. ಹೀಗಾಗಿ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಕೂಡಲೇ ತುಮಕೂರು ಜಿಲ್ಲಾಡಳಿತ ಇತ್ತ ಗಮನಹರಿಸಿ ಜನರ ಜೀವವನ್ನು ಕಾಪಾಡುವ ಕೆಲಸ ಮಾಡಬೇಕಿದೆ.