ಶಿರಾ:
ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸದಾ ಜನಪರ ಕಾಳಜಿಯುಳ್ಳ ಸುದ್ದಿಗಳನ್ನೇ ಮಾಡುತ್ತಾ, ಸಮಾಜಮುಖಿಯಾಗಿಯೇ ಕೆಲಸ ಮಾಡುತ್ತಾ ಬರ್ತಿದೆ. ಬಡಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ, ವಿವಿಧ ಇಲಾಖೆಗಳಲ್ಲಿ ಆಗ್ತಿರೋ ಅನ್ಯಾಯ, ಅಕ್ರಮಗಳ ಬಗ್ಗೆ, ಕಳಪೆ ಕಾಮಗಾರಿಗಳ ಬಗ್ಗೆಯೇ ವರದಿ ಮಾಡುತ್ತಾ ಅಧಿಕಾರಿಗಳ, ಜನಪ್ರತಿನಿಧಿಗಳ ಕಣ್ತೆರೆಸುವ ಕೆಲಸ ಮಾಡ್ತಿದೆ. ನಿನ್ನೆ ಕೂಡ ಇಂಥದ್ದೇ ಒಂದು ವರದಿ ನಿಮ್ಮ ಪ್ರಜಾಶಕ್ತಿ ಟಿವಿಯಲ್ಲಿ ಬಿತ್ತರವಾಗಿತ್ತು. ನಿಮ್ಮ ಪ್ರಜಾಶಕ್ತಿ ಟಿವಿಯಲ್ಲಿ ಸುದ್ದಿಯಾಗ್ತಿದ್ದಂತೆ ಇಷ್ಟು ದಿನ ಗಾಢನಿದ್ರೆಯಲ್ಲಿದ್ದ ಅಧಿಕಾರಿಗಳು ಸ್ಥಳಕ್ಕೆ ಓಡೋಡಿ ಹೋಗಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಶಾಗದಡು ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಕಳಪೆಯಾಗಿದೆ. ಜೊತೆಗೆ ಈ ಕಟ್ಟಡಕ್ಕೆ ಸರಿಯಾಗಿ ಕ್ಯೂರಿಂಗ್ ಕೂಡ ಮಾಡದೇ ಗುತ್ತಿಗೆದಾರ ನಿರ್ಲಕ್ಷ್ಯ ವಹಿಸಿದ್ದಾನೆ. ಈ ಕುರಿತು ಮೇಲಾಧಿಕಾರಿಗಳು ತಕ್ಷಣವೇ ಗ್ರಾಮಕ್ಕೆ ಭೇಟಿಕೊಟ್ಟು ಕಾಮಗಾರಿಯನ್ನು ಪರಿಶೀಲನೆ ನಡೆಸಬೇಕು ಅಂತಾ ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ನಿನ್ನೆ ನಿಮ್ಮ ಪ್ರಜಾಶಕ್ತಿ ಟಿವಿಯಲ್ಲಿ ವರದಿಯನ್ನ ಬಿತ್ತರಿಸಲಾಗಿತ್ತು. ಈ ವರದಿ ಬಿತ್ತರವಾಗ್ತಿದ್ದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು, ಕಟ್ಟಡ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸುವ ಕೆಲಸ ಮಾಡಿದ್ದಾರೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜಾ ನಾಯಕ್ ಅವರು ಇಂದು ಶಾಗದಡು ಗ್ರಾಮಕ್ಕೆ ಭೇಟಿ ನೀಡಿದ್ದು, ಅಂಗನವಾಡಿ ಕಟ್ಟಡದ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿದರು. ಜೊತೆಗೆ ಈ ಕಟ್ಟಡದ ಗುಣಮಟ್ಟವನ್ನು ಪರೀಕ್ಷೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಒಟ್ಟಿನಲ್ಲಿ ಶಾಗದಡು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕೇಂದ್ರದ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಅನ್ನೋದನ್ನು ಖುದ್ದು ಗ್ರಾಮಸ್ಥರೇ ಆರೋಪ ಮಾಡ್ತಾ ಇದ್ದು, ಇನ್ನು ಮೇಲಾದರೂ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ.