ಮನೆ ಮನೆ ಗಂಗೆ ಯೋಜನೆಯ ನಲ್ಲಿತುಮಕೂರು
ಶಿರಾ:
ರಾಜ್ಯದ ಪ್ರತಿ ಜನರಿಗೂ ಶುದ್ಧ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು ಜಾರಿಗೆ ತಂದಿದೆ, ಆದರೆ ಅದೆಷ್ಟೋ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಮನೆ ಮುಂದೆ ನೀರಿನ ನಲ್ಲಿ ಏನೋ ಹಾಕಲಾಗಿದೆ ಆದರೆ ಜನರಿಗೆ ನೀರು ಮಾತ್ರ ಸಿಗ್ತಾ ಇಲ್ಲ. ಬೇಸಿಗೆ ಮೊದಲೇ ಕೆಲ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಜನರು ಪರದಾಡುತ್ತಿದ್ದಾರೆ. ಈ ದುಸ್ಥಿತಿಗೆ ಶಿರಾ ತಾಲೂಕು ಸೇರಿದ್ದು ಶುದ್ಧ ನೀರಿನ ಅಭಾವ ಶುರುವಾಗಿದೆ.
ಹೌದು, ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಚಂಗಾವರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕೆ.ಕೆ ಪಾಳ್ಯ ಗ್ರಾಮದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಗ್ರಾಮದಲ್ಲಿ ಹಣ ಕೊಟ್ಟರು ಕೂಡ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನು ಈ ಗ್ರಾಮದಲ್ಲಿ 150 ಕುಟುಂಬ ಇದ್ದು, 700 ಮಂದಿ ಜನರಿದ್ದಾರೆ. ಮನೆ ಮನೆಗೆ ನೀರು ಒದಗಿಸಲು ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೂ ನಲ್ಲಿಯನ್ನು ಹಾಕಲಾಗಿದೆ. ಆದರೆ ನಲ್ಲಿ ಏನೋ ಇದೆ ಆದರೆ ಅದರಲ್ಲಿ ನೀರು ಮಾತ್ರ ಬರುತ್ತಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆ ಮಿತಿ ಮೀರಿದ್ದು, ಒಂದೂವರೆ ವರ್ಷದಿಂದ ಇಲ್ಲಿನ ಜನರಿಗೆ ಟ್ಯಾಂಕರ್ ನೀರೆ ಗತಿಯಾಗಿದೆ ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಗ್ರಾಮದಲ್ಲಿ ಒಂದಲ್ಲಾ- ಎರಡೂ, ಮೂರು ಟ್ಯಾಂಕರ್ಗಳಿವೆ, ಆದರೆ ನೀರು ಮಾತ್ರ ಬರಲ್ಲ. ಬೆಳಗ್ಗೆ ಕೆಲಸಕ್ಕೆ ಹೋಗಬೇಕು, ಸಂಜೆ ನೀರು ತರಲು ಹೋಗಬೇಕು. ನೀರು ಹಿಡಿಯಲು ಗುಂಡಿಯಲ್ಲಿ ಬಗ್ಗಿ ನಮ್ಮ ಬೆನ್ನು ಬಿದ್ದು ಹೋಗಿದೆ ಸ್ವಾಮಿ ನಮ್ಮ ಕಷ್ಟ ಕೇಳುವವರು ಯಾರು ಇಲ್ಲ ಅಂತಾ ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದಲ್ಲದೇ ಗ್ರಾಮದ ಬೋರ್ವೆಲ್ಗಳಲ್ಲಿ ಬರುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಗ್ರಾಮದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಎಲೆಕ್ಷನ್ ಬಂದಾಗ ಮಾತ್ರ ಜನಪ್ರತಿನಿಧಿಗಳು ಬರ್ತಾರೆ ಹೋಗ್ತಾರೆ ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿಸ್ತಾ ಇಲ್ಲ ಅಂತಾ ಜನರು ಕಿಡಿಕಾರುತ್ತಿದ್ದಾರೆ.
ನೀರು ಪ್ರಾಣ ಉಳಿಸುವ ಸಂಜೀವಿನಿ. ಊಟ ಇಲ್ಲದಿದ್ದರೂ ಒಂದು ದಿನ ಬದುಕಬಹುದು ಆದರೆ ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗ್ರಾಮದ ಜನರಿಗೆ ಅಗತ್ಯವಾಗಿ ಬೇಕಾಗಿರೋ ನೀರನ್ನು ಒದಗಿಸಿ, ಜನರ ಪ್ರಾಣವನ್ನು ಉಳಿಸಬೇಕಿದೆ.