ಶಿರಾ : ಸಿಬ್ಬಂದಿ ಕೊರತೆಯಿಂದ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಬೀಗ..!

ಆಯುಷ್ಮಾನ್‌ ಆರೋಗ್ಯ ಮಂದಿರ ಹೊನ್ನಗೊಂಡನಹಳ್ಳಿ ಶಿರಾ
ಆಯುಷ್ಮಾನ್‌ ಆರೋಗ್ಯ ಮಂದಿರ ಹೊನ್ನಗೊಂಡನಹಳ್ಳಿ ಶಿರಾ
ತುಮಕೂರು

ಶಿರಾ:

ಗ್ರಾಮೀಣಭಾಗದ ಜನರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆಂದು ಸರ್ಕಾರ ಆಯುಷ್ಮಾನ್‌ ಆರೋಗ್ಯ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಶಿರಾ ತಾಲೂಕಿನ ಹೊನ್ನಗೊಂಡನಹಳ್ಳಿ ಗ್ರಾಮದಲ್ಲಿರೋ ಆಯುಷ್ಮಾನ್‌ ಆರೋಗ್ಯ ಮಂದಿರಕ್ಕೆ ಹಲವು ತಿಂಗಳಿನಿಂದ ಬೀಗ ಬಿದ್ದಿದ್ದು, ಸುತ್ತಮುತ್ತ ಗ್ರಾಮದ ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

ಹೌದು ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ ಒಳಗೊಂಡಂತೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯೊಂದಿಗೆ, AB-HWC ಗಳ ಮೂಲಕ ಜನರ ಮನೆಗಳಿಗೆ ಹತ್ತಿರವೇ ಉಚಿತ ಅಗತ್ಯ ಔಷಧಗಳನ್ನು ಮತ್ತು ಚಿಕಿತ್ಸೆಗೆ ನೀಡುವ ಉದ್ದೇಶದಿಂದ ಶಿರಾದ ಹೊನ್ನಗೊಂಡನಹಳ್ಳಿಯಲ್ಲಿ ಆಯುಷ್ಮಾನ್‌ ಆರೋಗ್ಯ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಆರೋಗ್ಯ ಸಿಬ್ಬಂದಿ ಕೊರತೆಯಿಂದಾಗಿ ಆಯುಷ್ಮಾನ್‌ ಕೇಂದ್ರವನ್ನು ಮುಚ್ಚಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಇನ್ನು ಹೊನ್ನಗೊಂಡನಹಳ್ಳಿಯ ಆಯುಷ್ಮಾನ್‌ ಆರೋಗ್ಯ ಮಂದಿರ ತಾಲೂಕು ಕೇಂದ್ರದಿಂದ ಕೇವಲ 10 ಕಿಲೋ ಮೀಟರ್‌ ದೂರದಲ್ಲಿದೆ. ಅಪ್ಪಿಹಳ್ಳಿ, ದಾವತ್ ಪಾಳ್ಯ ಸೇರಿ 10ಕ್ಕೂ ಹೆಚ್ಚು ಗ್ರಾಮಗಳ ಹಿತದೃಷ್ಟಿಯಿಂದ ಆರೋಗ್ಯ ಮಂದಿರವನ್ನು ಸ್ಥಾಪನೆ ಮಾಡಲಾಗಿತ್ತು. ಇಲ್ಲಿ ಎರಡು ವಿಶಾಲವಾದ ಕಟ್ಟಡಗಳಿವೆ, ಸಿಬ್ಬಂದಿ ಉಳಿಯುವ ವಸತಿ ಗೃಹ ಸೇರಿದಂತೆ ಮೂಲಭೂತ ಸೌಕರ್ಯಗಳ ಇರುವ ಈ ಕೇಂದ್ರ ಇಲಾಖೆಯ ಯಾವುದೇ ಸಿಬ್ಬಂದಿ ಇಲ್ಲದ ಕಾರಣ ಕೇಂದ್ರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಇಲ್ಲಿನ ಜನರಿಗೆ ಹಾವು, ಚೇಳು ಕಡಿತ,  ಮುಂತಾದ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಲಭಿಸದೆ ತೀವ್ರ ಸಮಸ್ಯೆಯಾಗಿದೆ.

ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡದ ಬಾಗಿಲಿಗೆ ಬೀಗ ಹಾಕಲಾಗಿದೆ. ಗ್ರಾಮಸ್ಥರಿಗೆ ತೊಂದರೆ ಆಗುತ್ತಿದ್ದರೂ ವೈದ್ಯಾಧಿಕಾರಿಗಳು ಅಥವಾ ಸಿಬ್ಬಂದಿ ಇತ್ತ ತಲೆ ಹಾಕುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೂಡಲೇ ಆಯುಷ್ಮಾನ್‌ ಆರೋಗ್ಯ ಮಂದಿರವನ್ನು ತೆರೆಯದಿದ್ದರೆ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ವೈದ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮೀಣ ಜನರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.

Author:

...
Editor

ManyaSoft Admin

Ads in Post
share
No Reviews