ಮಧುಗಿರಿ:
ಗಡಿಭಾಗ ಮಧುಗಿರಿಯಲ್ಲಿ ಧಾರ್ಮಿಕ ಹಾಗೂ ಸೌಹಾರ್ದತೆಯ ಸಂಕೇತವಾಗಿ ಪ್ರತಿ ವರ್ಷದಂತೆ ನಡೆಯುವ ಗಂಧದ ಉತ್ಸವ ಹಾಗೂ ಉರುಸ್ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದಂಡಿಪುರದಲ್ಲಿ ನೆಲೆಸಿರುವ ಹಜರತ್ ಸೈಯದ್ ರಿಯಾಜದ್ದೀನ್ ಶಾಲಿಫೆರ ಫೈ ಅವರ 5ನೇ ವರ್ಷದ ಗಂಧದ ಉತ್ಸವ ಹಾಗೂ ಉರಸ್ ಕಾರ್ಯಕ್ರಮವು ಸರ್ವಧರ್ಮ ಸಮನ್ವಯತೆಯೊಂದಿಗೆ ನೆರವೇರಿತು.ಗೌರಿಬಿದನೂರು ಪೆನಗೊಂಡ ದೇವನಹಳ್ಳಿಯ ಮುಜಾವರ್‌ಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗಂಧದ ಉತ್ಸವವನ್ನು ನೆರವೇರಿಸಿದರು.
ಪ್ರತಿ ತಿಂಗಳ ಮೊದಲನೇ ಸೋಮವಾರ ಅನ್ನ ಸಂತರ್ಪಣೆ ನಡೆಯುವುದು ಇಲ್ಲಿನ ವಿಶೇಷ. ಅಲ್ಲದೆ , ಪ್ರತಿ ವರ್ಷ ನಡೆಯುವ ಗಂಧದ ಉತ್ಸವ ಹಾಗೂ ಉರುಸ್ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಇಲ್ಲಿಗೆ ಬರುವುದು ವಾಡಿಕೆ. ಇನ್ನು ಬರುವ ಭಕ್ತರಿಗೆ ಹಿಂದೂ ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಶಾಂತಿ ಸೌಹಾರ್ದತೆಯಿಂದ ಉರುಸ್ ಆಚರಣೆ ನೆರವೇರಿಸಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
ಇನ್ನು ಇದೇ ವೇಳೆ ಅಬ್ದುಲ್ ರಹಮಾನ್ ಖಾನ್ ಮಾತನಾಡಿ, ಗಡಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧ ಭಾವವಿಲ್ಲದೆ ಶಾಂತಿ ಮತ್ತು ಸೌಹಾರ್ದತೆಯಿಂದ ಸರ್ವರೂ ಸೇರಿ ಉರುಸು ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಪೂರ್ವಜರ ಕಾಲದಿಂದಲೂ ಗ್ರಾಮದ 2 ದರ್ಗಾಗಳಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಇನ್ನು ಗಡಿಭಾಗ ಮಧುಗಿರಯಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಹಿಂದೂ-ಮುಸ್ಲಿಂರ ನಡುವೆ ಭಾಂದವ್ಯ ಸಾರುತ್ತಿರುವುದು ಎಲ್ಲರ ಗಮನ ಸೆಳೆದಿದೆ.