ಪಾವಗಡ : ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಕಡ್ಡಾಯವಾಗಿ ಸರ್ಕಾರಿ ಕಚೇರಿಗಳಿಗೆ ರಜೆಯನ್ನು ಘೋಷಿಸಲಾಗುತ್ತದೆ. ಅತ್ಯಂತ ಅನಿರ್ವಾಯ ಪರಿಸ್ಥಿತಿಯಲ್ಲಿ ಮಾತ್ರ ಕೆಲಸ ಮಾಡಲು ಸರ್ಕಾರವೇ ಸೂಚನೆ ನೀಡಿರುತ್ತೆ. ಅದನ್ನು ಬಿಟ್ಟು ಬೇರೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಚೇರಿ ತೆರೆಯುವ ಆಗಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ನೋಂದಣಿ ಕಛೇರಿಯನ್ನು ತೆರೆದು ಕಂಪ್ಯೂಟರ್ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಆದ್ರೆ ಇದನ್ನ ಕಂಡು ಪ್ರಶ್ನಿಸಲು ಹೋದ ಸಾರ್ವಜನಿಕರ ಮೇಲೆಯೇ ಮಹಿಳೆ ದರ್ಪ ತೋರಿರುವ ಘಟನೆ ನಡೆದಿದೆ. ಇತ್ತ ಸ್ಥಳಕ್ಕೆ ಬಂದ ಅಧಿಕಾರಿಗಳು ಕೂಡ ಸಾರ್ವಜನಿಕರ ಮೇಲೆ ಮುಗಿಬಿದ್ದಿರುವ ಘಟನೆ ಕೂಡ ನಡೆದಿದೆ.
ಹೌದು, ಇಂತಹದೊಂದು ಘಟನೆ ನಡೆದಿರೋದು ಪಾವಗಡದಲ್ಲಿ. ಪಟ್ಟಣದ ನೋಂದಣಿ ಕಚೇರಿ ಎರಡನೇ ಶನಿವಾರದ ನಿಮಿತ್ತ ನಿನ್ನೆ ರಜೆ ಇತ್ತು. ಆದ್ರೆ ಅನಾಮಿಕ ಮಹಿಳೆಯೊಬ್ಬಳು ನೋಂದಣಿ ಕಛೇರಿಯನ್ನು ಓಪನ್ ಮಾಡಿಕೊಂಡು ಕೆಲಸ ಮಾಡುತ್ತಿದ್ದಳು. ಈ ವಿಷಯ ತಿಳಿದ ಸ್ಥಳೀಯರಾದ ಗೋವಿಂದಪ್ಪ ಎಂಬುವವರು ಸರ್ಕಾರಿ ರಜೆ ದಿನ ಕಚೇರಿ ಓಪನ್ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಆದ್ರೆ ಇದಕ್ಕೆ ಮಹಿಳೆಯ ಸಾರ್ವಜನಿಕರ ಮೇಲೆ ದರ್ಪ ತೋರಿದ್ದಾಳೆ.
ಇನ್ನು ಇಷ್ಟಕ್ಕೆ ಸುಮ್ಮನಾಗದ ಗೋವಿಂದರಾಜು ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ರಜೆ ಸಮಯದಲ್ಲಿ ತಮಗೆ ಕೆಲಸ ಮಾಡಲು ಯಾರು ಪರ್ಮಿಷನ್ ಕೊಟ್ಟಿದ್ದು ಎಂದು ಪ್ರಶ್ನಿಸಿದ್ದಾರೆ. ಪೊಲೀಸರ ಪ್ರಶ್ನೆಗೆ ತಬ್ಬಿಬ್ಬಾದ ಮಹಿಳೆ ಅಂಗಡಿಯಿಂದ ಹೊರಬಂದು ಬಾಗಿಲು ಮುಚ್ಚಿದ್ದಾಳೆ.
ಇತ್ತ ಉಪನೋಂದಣಿ ಕಚೇರಿ ಕಡೆ ಬಂದಂತಹ ಅಧಿಕಾರಿಗಳು ಮಹಿಳೆಯನ್ನು ಬಿಟ್ಟು ಸಾರ್ವಜನಿಕರನ್ನೇ ಪ್ರಶ್ನೆ ಮಾಡಲು ಮುಂದಾಗಿದ್ದಾರೆ. ಕಚೇರಿಯ ಶೆಟರ್ ಓಪನ್ ಮಾಡಲು, ನಿಮಗೆ ಅಧಿಕಾರ ಕೊಟ್ಟವರು ಯಾರು ಅಂತ ಜನರ ಮೇಲೆ ಮುಗಿಬಿದ್ದಿದ್ದಾರೆ. ಇತ್ತ ಸಾರ್ವಜನಿಕರು ಇಂದು 2ನೇ ಶನಿವಾರ ಇವತ್ತು ಸರ್ಕಾರಿ ಕಚೇರಿ ಬಾಗಿಲು ತೆಗೆಯಬಾರದು ಅಂತ ಗೊತ್ತಿಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಈ ದಿನ ಬಿಟ್ಟು ಇನ್ನ ಯಾವ ಸಮಯದಲ್ಲಿ ತೆಗೆಯಬೇಕು ಎಂದು ಅಧಿಕಾರದ ದರ್ಪ ತೋರಿದ್ದಾರೆ.
ಇನ್ನು ಪಾವಗಡದ ನೋಂದಣಿ ಕಚೇರಿಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಅನ್ನೋ ಮಾತುಗಳು ಕೇಳಬರ್ತಿವೆ. ಇದರ ನಡುವೆ ಹೀಗೆ ರಜೆಯ ದಿನದಲ್ಲಿ ಅನಾಮಿಕ ಮಹಿಳೆ ಅಂಗಡಿ ಓಪನ್ ಮಾಡಿಕೊಂಡು ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಂಗಡಿ ತೆರೆದು ಕಂಪ್ಯೂಟರ್ ಕೆಲಸ ಮಾಡುತ್ತಿದ್ದ ವಿಚಾರವಾಗಿ ಸಂಪೂರ್ಣ ತನಿಖೆ ನಡೆಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ರು.
ಅದೇನೆ ಆಗಲಿ ಸರ್ಕಾರಿ ರಜೆ ದಿನದಲ್ಲಿ ಕಚೇರಿ ತೆರೆದು ಕೆಲಸ ಮಾಡಿಸುತ್ತಿರುವುದರ ಹಿಂದಿನ ಉದ್ದೇಶವೇನು ಅನ್ನೋದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ. ಇತ್ತ ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ರಶ್ನೆ ಕೇಳಿದ ಸಾರ್ವಜನಿಕರ ಮೇಲೆ ದರ್ಪ ತೋರಿರುವುದು ಎಲ್ಲೊ ಒಂದು ಕಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.