ಮಧುಗಿರಿ :
ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಜಾನಪದ ಉತ್ಸವ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ರಾಜೇಂದ್ರ ರಾಜಣ್ಣ, ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಈ ಹಿಂದೆ ಜಾನಪದ ಹಾಡು ಹಾಗೂ ನಾಟಕಗಳನ್ನು ಹಾಡುತ್ತಿದ್ದರು. ಆದರೆ ಈಗ ಅವುಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ ಎಂದರು. ಜಾನಪದ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ತಲೆಮಾರುಗಳು ಬದಲಾದಂತೆ ಜನಪದ ಆಚಾರ ವಿಚಾರಗಳು, ಉಡುಗೆ-ತೊಡುಗೆಗಳು ಬದಲಾವಣೆಗೊಳಪಡುತ್ತಿದ್ದು, ಯುವ ಸಮೂಹ ನಮ್ಮ ಹಿರಿಯರ ಇತಿಹಾಸವನ್ನು ಬೆಳೆದುಬಂದ ದಾರಿಯನ್ನು ಮರೆಯದೆ ಜೀವನದಲ್ಲಿ ಜಾನಪದರ ಅಂಶಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಜಾನಪದ ಉತ್ಸವದ ಅಂಗವಾಗಿ ಪ್ರಾಧ್ಯಾಪಕರು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಗ್ರಾಮೀಣ ಸೊಗಡಿನ ಉಡುಪುಗಳನ್ನು ತೊಟ್ಟು ಜಾನಪದ ಉತ್ಸವವನ್ನು ಸಂಭ್ರಮಿಸಿದರು. ಈ ವೇಳೆ ರಾಜ್ಯ ಜಾನಪದ ಸಂಗೀತ ಮತ್ತು ಯಕ್ಷಗಾನ ಬಯಲಾಟ ಸಂಘದ ಅಧ್ಯಕ್ಷ ಸಣ್ಣ ಹೊನ್ನಯ್ಯ ಕಂಟಲಗೆರೆ, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಪ್ರಾಂಶುಪಾಲ ಕುಮಾರ್ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.