ಮೈಸೂರು : ತಿಮ್ಮಪ್ಪನ ದೇವಸ್ಥಾನಕ್ಕೆ ಮೈಸೂರಿನ ರಾಜಮಾತೆ ಪ್ರಮೋದಾ ದೇವಿ ಒಡೆಯಾರ್ ಅವರು ಎರಡು ಬೃಹತ್ ಬೆಳ್ಳಿಯ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಪ್ರತಿ ಬೆಳ್ಳಿ ದೀಪ ಸುಮಾರು 50 ಕೆ.ಜಿ ತೂಕ ಇದೆ. ಎರಡೂ ದೀಪಗಳು ಸೇರಿ ಒಂದು ಕ್ವಿಂಟಾಲ್ ತೂಗುತ್ತದೆ ಎನ್ನಲಾಗಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ದೇವಾಲಯದ ಅಧಿಕಾರಿಗಳು ರಂಗನಾಯಕುಲ ಮಂಟಪದಲ್ಲಿ ಬೆಳ್ಳಿ ದೀಪಗಳನ್ನು ಪ್ರಮೋದಾ ದೇವಿ ಒಡೆಯಾರ್ ಅವರಿಂದ ಸ್ವೀಕರಿಸಿದರು. ದೇವಸ್ಥಾನದ ಗರ್ಭಗುಡಿಯಲ್ಲಿ ಬೆಳ್ಳಿ ದೀಪಗಳನ್ನು ಬೆಳಗಿಸುವುದು ಸಂಪ್ರದಾಯ. ಸುಮಾರು 300 ವರ್ಷಗಳ ಹಿಂದೆ, ಅಂದಿನ ಮೈಸೂರು ಮಹಾರಾಜರು ಬೃಹತ್ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದರು. ಅವುಗಳನ್ನು ಗರ್ಭಗುಡಿಯಲ್ಲಿ ಬೆಳಗಿಸಲಾಗುತ್ತಿದೆ. ಮೂರು ಶತಮಾನಗಳ ನಂತರ ಮೈಸೂರಿನ ರಾಜಮಾತೆ ಪ್ರಮೋದಾ ದೇವಿ ಒಡೆಯಾರ್ ಮತ್ತೊಮ್ಮೆ ಬೆಳ್ಳಿ ದೀಪಗಳನ್ನು ಕಾಣಿಕೆ ನೀಡಿ ಗಮನ ಸೆಳೆದಿದ್ದಾರೆ.