ರಾಯಚೂರು:
ಜೋಳದ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆ ಬಾಳುವ ಬೆಳೆ ಹಾನಿಯಾದ ಘಟನೆ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದಿದೆ.
ಕಪಗಲ್ ಗ್ರಾಮದ ರೈತ ರಾಜಶೇಖರ ಎಂಬುವವರ ಲಕ್ಷಾಂತರ ರೂ ಬೆಲೆ ಬಾಳುವ ಜೋಳದ ಬೆಳೆ ಸಂಪೂರ್ಣ ಹಾನಿಯಾಗಿದೆ. ರಾಶಿ ಮಾಡುವುದಕ್ಕಾಗಿ ಕಟಾವ್ ಮಾಡಿದ್ದ ಸೊಪ್ಪಿಗೆ ಇಂದು ಬೆಳಗಿನ ಜಾವ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂದು ರೈತ ರಾಜಶೇಖರ ಆರೋಪಿಸುತ್ತಿದ್ದಾರೆ. ಜೋಳದ ಸೊಪ್ಪು ಹಾಗೂ ಜಮೀನಿನಲ್ಲಿನ ಸಾಲುಗಳಿಗೂ ಬೆಂಕಿ ಹೊತ್ತಿಕೊಂಡ ಪರಿಣಾಮ, ಆರು ಎಕರೆಯಲ್ಲಿ ಬೆಳೆದಿದ್ದ ಸುಮಾರು 6 ಲಕ್ಷ ರೂಪಾಯಿ ಬೆಲೆ ಬಾಳುವ ಬೆಳೆ ಬೆಂಕಿಗಾಹುತಿಯಾಗಿದೆ.
ರೈತ ರಾಜಶೇಖರ ಇಂದು ಜೋಳದ ರಾಶಿ ಮಾಡುವ ಸಿದ್ದತೆಯಲ್ಲಿದ್ದರು, ಆದರೆ ಆಕಸ್ಮಿಕ ಬೆಂಕಿಗೆ ಜೋಳದ ಬೆಳೆ ಸಂಪೂರ್ಣ ಹಾನಿಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಬೆಳೆ ಸಂಪೂರ್ಣ ಭಸ್ಮವಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಳೆ ನಾಶಕ್ಕೆ ಪರಿಹಾರ ಒದಗಿಸುವಂತೆ ರೈತ ರಾಜಶೇಖರ ಒತ್ತಾಯಿಸಿದ್ದಾರೆ.