ಶಿರಾ :
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ವಿವಿಧೆಡೆ ನಿನ್ನೆ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಗಾಳಿಮಳೆಯಿಂದಾಗಿ ಕಟಾವಿಗೆ ಬಂದಿದ್ದ ಒಂದು ಸಾವಿರ ಬಾಳೆಗಿಡಗಳು ನೆಲಕ್ಕುರುಳಿದ್ದು ರೈತ ಕಂಗಾಲಾಗಿದ್ದಾನೆ.
ಶಿರಾ ತಾಲೂಕಿನ ಮಂಗನಹಳ್ಳಿ ಗ್ರಾಮದಲ್ಲಿ ನಿನ್ನೆ ಸುರಿದಿರುವ ಭಾರೀ ಗಾಳಿಮಳೆಯಿಂದಾಗಿ ಕೆ. ಜಿ ಗುರುರಾಜ್ ಎಂಬುವರಿಗೆ ಸೇರಿದ ಬಾಳೆತೋಟ ಸಂಪೂರ್ಣವಾಗಿ ನೆಲಕಚ್ಚಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಹೀಗಾಗಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಗುರುರಾಜುಗೆ ಬರಸಿಡಿಲು ಬಡಿದಂತಾಗಿದೆ. ಮೊದಲ ಮಳೆಯಿಂದ ಅಪಾರ ಹಾನಿಯಾಗಿದ್ದು, ಅಂದಾಜು 1.5 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಈಗ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಗೆ ಉತ್ತಮ ಬೆಲೆಯಿದ್ದು, ಫಸಲಿಗೆ ಬಂದಿದ್ದ ಬೆಳೆ ಮಳೆಗೆ ನೆಲಕಚ್ಚಿರೋದರಿಂದ ಅನ್ನದಾತ ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ. ನೆಲಕಚ್ಚಿದ ಬೆಳೆ ಕಂಡು ರೈತ ಗುರುರಾಜು ಕಣ್ಣೀರಿಟ್ಟಿದ್ದಾನೆ.
ಬೇಸಿಗೆಯಲ್ಲೂ ಸಹ ಕಷ್ಟಪಟ್ಟು ನೀರು ಹಾಯಿಸಿ ಬೆಳೆಯನ್ನ ಉಳಿಸಿಕೊಂಡಿದ್ದರು. ಆದರೆ ನಿನ್ನೆ ಬೀಸಿದ ಗಾಳಿಗೆ ಫಸಲು ನೆಲಕಚ್ಚಿದೆ. ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತ ಮನವಿ ಮಾಡಿಕೊಂಡಿದ್ದಾರೆ.