ಜೋಳದ ರೊಟ್ಟಿ ಉತ್ತರ ಕರ್ನಾಟಕದಲ್ಲಿ ಪ್ರಧಾನ ಆಹಾರವಾಗಿದೆ. ಜೋಳದ ರೊಟ್ಟಿ ಎಣ್ಣೆ ಮುಕ್ತ, ಪೌಷ್ಠಿಕ ಆಹಾರವಾಗಿದ್ದು ಕರ್ನಾಟಕಕ್ಕೆ ಭೇಟಿನೀಡುವ ಬಹುತೇಕ ಪ್ರವಾಸಿಗರು ತಪ್ಪದೇ ರುಚಿ ನೋಡಬಯಸುತ್ತಾರೆ.
ಜೋಳದ ರೊಟ್ಟಿ ಮಾಡುವ ವಿಧಾನವೆಂದರೆ ಜೋಳದ ಹಿಟ್ಟನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಹಿಟ್ಟನ್ನು ತಯಾರಿಸಲಾಗುತ್ತದೆ. ಹಿಟ್ಟನ್ನು ತಯಾರಿಸಿದ ನಂತರ, ತಕ್ಷಣ ರೊಟ್ಟಿ ತಯಾರಿಸಲು ಪ್ರಾರಂಭಿಸಿ. ಹಿಟ್ಟನ್ನು ಹೆಚ್ಚು ಸಮಯ ಇಡಬಾರದು ಏಕೆಂದರೆ ಅದು ಅದರ ತೇವಾಂಶವನ್ನು ಕಳೆದುಕೊಳ್ಳುತ್ತದೆ ಮತ್ತು ಬಿರುಕು ತಿರುಗುವಂತೆ ಹೆಚ್ಚು ಸಮಯ ಇಟ್ಟುಕೊಳ್ಳಬಾರದು. ಹಿಟ್ಟಿನ ಸಣ್ಣ ಭಾಗವನ್ನು ವೃತ್ತಾಕಾರದ ಆಕಾರದಲ್ಲಿ ಲಟ್ಟಣಿಗೆ ಬಳಸಿ ಅಥವಾ ಕೈಗಳನ್ನು ಬಳಸಿ ತೆಳ್ಳಗೆ ಹರಡಲಾಗುತ್ತದೆ. ನಂತರ ಅದನ್ನು ಕೆಲವು ನಿಮಿಷಗಳ ಕಾಲ ಕಾವಲಿ ಅಥವಾ ತವಾ ಮೇಲೆ ಬಿಸಿಮಾಡಲಾಗುತ್ತದೆ. ಕೆಲವು ಸಾಂಪ್ರದಾಯಿಕ ಮನೆಗಳಲ್ಲಿ ಜೋಳದ ರೊಟ್ಟಿಯನ್ನು ಬೆಂಕಿಯ ಮೇಲೆ ಹಿಡಿದು ಅಥವಾ ಬಿಸಿ ಕಲ್ಲಿದ್ದಲಿನ (ಕೆಂಡದ) ಮೇಲೆ ಇಟ್ಟು ಬಿಸಿಮಾಡಲಾಗುತ್ತದೆ.
ಜೋಳದ ರೊಟ್ಟಿಯನ್ನು ಹೆಚ್ಚಾಗಿ ಈರುಳ್ಳಿ ಮತ್ತು ಸೌತೆಕಾಯಿ, ಚಟ್ನಿಪುಡಿ, ಬೆಳ್ಳುಳ್ಳಿ ಚಟ್ನಿ, ಮತ್ತಿತರ ಮಸಾಲೆಯುಕ್ತ ಮೇಲೋಗರಗಳು ಅಥವಾ ಸಾಂಬಾರಿನೊಂದಿಗೆ ಬಡಿಸಲಾಗುತ್ತದೆ. ಸುಟ್ಟ ಬದನೆಕಾಯಿ ಬಳಸಿ ತಯಾರಿಸಿದ ಮೇಲೋಗರ ಮತ್ತು ಮೆಂತ್ಯೆ ಬಳಸಿ ತಯಾರಿಸಿದ ತೊವ್ವೆ ಜೋಳದ ರೊಟ್ಟಿಯೊಂದಿಗೆ ನಂಜಿಕೊಳ್ಳಲು ಬಡಿಸಲಾಗುವ ಜನಪ್ರಿಯ ಭಕ್ಷ್ಯಗಳಾಗಿವೆ.
ಜೋಳದ ರೊಟ್ಟಿ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಎಲ್ಲಾ ಉಪಹಾರ ಗೃಹ, ಖಾನಾವಳಿಗಳಲ್ಲಿ ಊಟದ ಸಮಯದಲ್ಲಿ ಸಿಗುತ್ತದೆ. ಬೆಂಗಳೂರಿನ ಹಲವಾರು ಉಪಹಾರ ಗೃಹಗಳು ಜೋಳದ ರೊಟ್ಟಿ ಸೇರಿದಂತೆ ಇತರ ಉತ್ತರ ಕರ್ನಾಟಕ ಆಹಾರವನ್ನು ಪೂರೈಸುವಲ್ಲಿ ಪರಿಣಿತಿ ಪಡೆದಿವೆ.