ನವದೆಹಲಿ:
ಪ್ರಧಾನಿ ನರೇಂದ್ರ ಮೋದಿರವರು ಬ್ರಿಟನ್ ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರನ್ನು ನಿನ್ನೆ ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ರಿಷಿ ಸುನಕ್ ಅವರನ್ನು ಭಾರತದ ಉತ್ತಮ ಸ್ನೇಹಿತ ಎಂದು ಪ್ರಧಾನಿ ಹೊಗಳಿದ್ದಾರೆ. ರಿಷಿ ಸುನಕ್ ಅವರ ಕುಟುಂಬವನ್ನು ಭೇಟಿಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಉಭಯ ನಾಯಕರು ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ. ರಿಷಿ ಸುನಕ್ ಭಾರತದ ಉತ್ತಮ ಸ್ನೇಹಿತ, ಭಾರತ-ಯುಕೆ ಸಂಬಂಧಗಳ ಬಗ್ಗೆ ಅವರು ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಮೋದಿ ಭೇಟಿ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ್ದು ಸಂತೋಷವಾಯಿತು. ನಾವು ಅನೇಕ ವಿಷಯಗಳ ಕುರಿತು ಮಾತುಕತೆ ನಡೆಸಿದ್ದೇವೆ. ಸುನಕ್ ಅವರು ಭಾರತದ ಉತ್ತಮ ಸ್ನೇಹಿತ. ಭಾರತ-ಯುಕೆ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಅವರು ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರು ಸುನಕ್ ಮತ್ತು ಅವರ ಕುಟುಂಬವನ್ನು ಸ್ವಾಗತಿಸಿದರು. ತಮ್ಮ ಭೇಟಿಯ ಸಮಯದಲ್ಲಿ ಸುನಕ್ ಕುಟುಂಬವು ಸಂಸತ್ ಭವನವನ್ನು ವೀಕ್ಷಿಸಿದರು. ಅದರ ವಾಸ್ತುಶಿಲ್ಪದ ಭವ್ಯತೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ಯಾಲರಿಗಳು, ಕೊಠಡಿಗಳು, ಸಂವಿಧಾನ ಮಂಟಪ ಮತ್ತು ಸಂವಿಧಾನ್ ಸದನದಂತಹ ಸ್ಥಳಗಳಿಗೆ ರಿಷಿ ಸುನಕ್ ಕುಟುಂಬ ಭೇಟಿ ನೀಡಿದರು.