ಪಾವಗಡ :
ಪಾವಗಡದ ಮುಗದಾಳಬೆಟ್ಟ ಗೊಲ್ಲರಹಟ್ಟಿಯ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು, ಜೀವನ ಮಾಡಲು ಹೆಣಗಾಡುವಂತಾಗಿತ್ತು. ಗೊಲ್ಲರಹಟ್ಟಿ ಜನರಿಗೆ ದಾನಿಯೊಬ್ಬರು ಜಮೀನನ್ನು ದಾನವಾಗಿ ನೀಡಿದರು, ಹೀಗಾಗಿ ಅಲ್ಲಿಯ ಜನರು ಅವರಿಗೆ ಮೂಲಭೂತವಾಗಿ ಬೇಕಾಗಿರೋ ಸೌಲಭ್ಯಗಳನ್ನು ಮಾಡಿಕೊಳ್ತಾ ಇದ್ದರು. ಆದರೆ ಜಮೀನು ಸಂಬಂಧ ಕೋರ್ಟ್ ನಲ್ಲಿ ದಾವೆ ಹೂಡಿದ್ದರಿಂದ ಇಲ್ಲಿನ ಜನರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗ್ತಾ ಇರಲಿಲ್ಲ. ಇಲ್ಲಿನ ಮಹಿಳೆಯರು ಸ್ನಾನ ಮಾಡಲು ಸ್ನಾನದ ಗೃಹವಾಗಲಿ, ಶೌಚಾಲಯದ ವ್ಯವಸ್ಥೆ ಇಲ್ಲದೇ ಸೀರೆಗಳನ್ನು ಕಟ್ಟಿಕೊಂಡು ಸ್ನಾನ ಮಾಡುವಂತಹ ಸ್ಥಿತಿ ಇತ್ತು. ಇದರಿಂದ ಗೊಲ್ಲರಹಟ್ಟಿ ಜನರು ನಿತ್ಯ ಸಂಕಷ್ಟದಲ್ಲೇ ಇದ್ದು, ಮೊನ್ನೆ ಗ್ರಾಮದ ಹಾಗೂ ಸಮುದಾಯದ ಮುಖಂಡರು ಸಭೆ ನಡೆಸುವ ಮೂಲಕ ಆಕ್ರೋಶ ಹಾಕಿದರು.
ಗೊಲ್ಲರಹಟ್ಟಿ ಜನರ ಸಂಕಷ್ಟದ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ, ಹಟ್ಟಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲಿನ ಸಮಸ್ಯೆಯನ್ನು ಕಂಡು ದಂಗಾಗಿದ್ದು, ಈ ಗ್ರಾಮದ ಜಮೀನು ವಿವಾದ ಸಂಬಂಧ ಜೂನ್ 16ಕ್ಕೆ ಹೊರಬೀಳಲಿದ್ದು, ತೀರ್ಪು ಬಂದ ಬಳಿಕ ಇಲ್ಲಿನ ಜನರಿಗೆ ಸರ್ಕಾರಿ ಸವಲತ್ತುಗಳನ್ನು ಕಲ್ಪಿಸಿಕೊಡಲು ಸ್ಥಳದಲ್ಲೇ ನಾಗಲಕ್ಷ್ಮೀ ಚೌಧರಿ ಸೂಚಿಸಿದರು. ಅಲ್ಲದೇ ಅಲ್ಲಿವರೆಗೂ ಇಲ್ಲಿನ ಮಹಿಳೆಯರ ಅನುಕೂಲಕ್ಕಾಗಿ ಮೊಬೈಲ್ ಟಾಯ್ಲೆಟ್ ಸ್ಥಾಪನೆ ಮಾಡಲು ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಹಟ್ಟಿ ಜನರಿಗೆ ನಿವೇಶನ ಹಕ್ಕುಪತ್ರಗಳನ್ನು ತಹಶೀಲ್ದಾರ್ ಮೂಲಕ ನೀಡಲಾಗುವುದು ಎಂದು ಜನರಿಗೆ ನಾಗಲಕ್ಷ್ಮೀ ಚೌಧರಿ ಭರವಸೆ ನೀಡಿ, ಈ ಬಗ್ಗೆ ಕ್ರಮ ಕೈಗೊಳ್ಳಲು ತಹಶೀಲ್ದಾರ್ ವರದರಾಜುಗೆ ತಿಳಿಸಿದ್ದಾರೆ.
ಮುಗದಾಳ ಹಟ್ಟಿಗೆ ನಾಗಲಕ್ಷ್ಮೀ ಚೌಧರಿ ಆಗಮಿಸುತ್ತಿದ್ದಂತೆ ಹಟ್ಟಿಯ ಮಹಿಳೆಯರು ಅರಿಶಿಣ, ಕುಂಕುಮ ಹಚ್ಚಿ, ಹೂಮಳೆ ಸುರಿಸಿ, ಮಡಲಕ್ಕಿ ತುಂಬಿ ತುಂಬು ಹೃದಯದಿಂದ ಸ್ವಾಗತಿಸಿದರು. ಜನರ ಪ್ರೀತಿಗೆ ನಾಗಲಕ್ಷ್ಮೀ ಚೌಧರಿ ಭಾವುಕರಾದರೆ, ಇಷ್ಟು ದಿನ ನಮ್ಮ ಕಡೆ ತಿರುಗಿನೋಡದ ಅಧಿಕಾರಿಗಳು ಇಂದು ಖುದ್ದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯೇ ಬಂದು, ಸಮಸ್ಯೆ ಆಲಿಸಿದ್ದಕ್ಕೆ ಇಲ್ಲಿನ ಜನರಿಗೆ ತಮಗೆ ನ್ಯಾಯ ಸಿಗುವ ನಿರೀಕ್ಷೆ ಸಿಕ್ಕಿ ಖುಷಿಯಾಗಿದ್ದಾರೆ.