MOVIE : ಮುಗಿಲ್ ಪೇಟೆ ನಟಿ ಕಯಾದು ಲೋಹರ್‌ಗೆ ಎದುರಾಯ್ತು ಇಡಿ ಸಂಕಷ್ಟ?

ಸಿನಿಮಾ : ಇತ್ತೀಚೆಗಷ್ಟೇ ತಮಿಳಿನಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್  ‘ಡ್ರ್ಯಾಗನ್’ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಕಯಾದು ಲೋಹರ್ ಇದೀಗ ಇಡಿ ತನಿಖೆಯಲ್ಲಿ ಸಿಲುಕಿರುವ ವಿಚಾರ ತಮಿಳು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಸ್ಸಾಂ ಮೂಲದ ಈ ನಟಿ, ಕೇವಲ ಒಂದು ರಾತ್ರಿ ಹೈ-ಪ್ರೊಫೈಲ್ ಪಾರ್ಟಿಗೆ ಹಾಜರಾಗಲು 35 ಲಕ್ಷ ರೂಪಾಯಿ ಹಣ ಸ್ವೀಕರಿಸಿದ್ದರ ಕುರಿತು ಇಡಿಗೆ ಮಾಹಿತಿ ದೊರೆತಿದ್ದು, ಇದೀಗ ಅವರು ಆರೋಪಪಟ್ಟಿಯಲ್ಲಿಯೂ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಸರ್ಕಾರಿ ಮದ್ಯ ಮಾರಾಟ ಸಂಸ್ಥೆಯಾದ ಟಾಸ್ಮಾಕ್ (TASMAC) ಗುತ್ತಿಗೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಏಪ್ರಿಲ್‌ನಲ್ಲಿ ಈ ಸಂಸ್ಥೆಯ ಹಲವಾರು ಕಚೇರಿ ಹಾಗೂ ಸಂಬಂಧಿತ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಪತ್ತೆಯಾಗಿದ್ದ ದಾಖಲೆಗಳ ಆಧಾರದ ಮೇಲೆ, ಹಗರಣದಲ್ಲಿ ಭಾಗಿಯಾದ ಕೆಲ ಉದ್ಯಮಿಗಳು ಹಾಗೂ ರಾಜಕೀಯ ಮುಖಂಡರು ಹಲವು ಹೈ-ಪ್ರೊಫೈಲ್ ಪಾರ್ಟಿಗಳನ್ನು ಆಯೋಜಿಸಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಪಾರ್ಟಿಗಳಲ್ಲಿ ಹಾಜರಾಗಿದ್ದ ವ್ಯಕ್ತಿಗಳಲ್ಲಿ ನಟಿ ಕಯಾದು ಲೋಹರ್ ಕೂಡ ಇದ್ದಿದ್ದು, ಅವರು 35 ಲಕ್ಷ ರೂಪಾಯಿ ಪಾವತಿಗಾಗಿ ಬಂದಿದ್ದು ಇಡಿಗೆ ತಿಳಿದುಬಂದಿದೆ. ಇದೀಗ ಅವರ ಹೆಸರು ಚಾರ್ಜ್‌ಶೀಟ್‌ನಲ್ಲಿ ಸೇರ್ಪಡೆಯಾಗುವ ಹಂತದಲ್ಲಿದ್ದು, ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಇನ್ನು 2021ರ ಕನ್ನಡ ಚಲನಚಿತ್ರ ‘ಮುಗಿಲ್ ಪೇಟೆ’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಯಾದು, ‘ಡ್ರ್ಯಾಗನ್’ ಹಿಟ್ ಆದ ನಂತರ ತಮಿಳು ಹಾಗೂ ತೆಲುಗು ಚಿತ್ರರಂಗಗಳಿಂದ ವಿವಿಧ ಆಫರ್‌ಗಳನ್ನು ಪಡೆದಿದ್ದರು. ಈಗಾಗಲೇ ಮೂರು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು ಈ ಪ್ರಕರಣದಿಂದ ಅವರ ವೃತ್ತಿ ಬದುಕಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ.

ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕೆಲವರು ಚಿತ್ರರಂಗದ "ಕತ್ತಲ ವ್ಯವಹಾರ"ಗಳ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ನಟಿಯರು ಹೈ-ಪ್ರೊಫೈಲ್ ಪಾರ್ಟಿಗಳಿಗೆ ಹೋಗುವುದೇನು ಹೊಸ ವಿಷಯವಲ್ಲವಾದರೂ, ಹಣಕಾಸು ಲೆಕ್ಕಪತ್ರಗಳಲ್ಲಿ ಗೋಚರವಾಗದ ರೀತಿ ಹಣ ಪಡೆದಿರುವ ಆರೋಪ ಗಂಭೀರವಾಗಿದೆ.

ಟಾಸ್ಮಾಕ್ ಹಗರಣ ತಮಿಳುನಾಡು ರಾಜಕೀಯದಲ್ಲಿ ಹಲ್​ಚಲ್ ಎಬ್ಬಿಸಿದೆ. ಈ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದ್ದು, ಸುಪ್ರೀಂ ಕೋರ್ಟ್​, ಇಡಿಗೆ ತಪರಾಕಿ ಹಾಗಿದೆ. ಕಾರ್ಪೊರೇಷನ್ ಒಂದರ ಮೇಲೆ ಕ್ರಿಮಿನಲ್ ಆರೋಪ ಹೇಗೆ ಮಾಡುತ್ತೀರಿ, ‘ಇಡಿ ಎಲ್ಲ ಗಡಿಗಳನ್ನು ಮೀರಿ ವರ್ತಿಸುತ್ತಿದೆ’ ಎಂದು ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದಾರೆ. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.

 

Author:

...
Keerthana J

Copy Editor

prajashakthi tv

share
No Reviews