ಹೊಸಕೋಟೆ : ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರ್ತಾರೆ ಕೆಟ್ಟ ತಾಯಿ ಇರೋಲ್ಲ ಅಂತಾರೆ. ಆದರೆ ಇಲ್ಲೊಬ್ಬ ಪಾಪಿ ತಾಯಿ ಆಗ ತಾನೇ ಹುಟ್ಟಿದ ತನ್ನ ಕರಳುಬಳ್ಳಿಯನ್ನೇ ಬ್ಯಾಗ್‌ನಲ್ಲಿ ಇಟ್ಟು ಬೀದಿಲಿ ಎಸೆದು ಪರಾರಿಯಾಗಿದ್ದಾಳೆ. ಇತ್ತ ಮದುವೆಯಾದ ಎಷ್ಟೋ ಹೆಣ್ಣುಮಕ್ಕಳು ತಮಗೆ ಮದುವೆ ಆಗಿ ವರ್ಷಗಳೇ ಕಳೆದರೂ ಇನ್ನು ಮಕ್ಕಳಿಲ್ಲ ಅಂತ ಕೊರಗುತ್ತಾರೆ. ಕಂಡ ಕಂಡ ದೇವರಿಗೆಲ್ಲ ಕೈಮುಗಿದು ಹರಕೆ ಹೊತ್ತುಕೊಳ್ತಾರೆ. ಉರುಳು ಸೇವೆ, ವಿಶಿಷ್ಟ ಪೂಜೆ ಪುನಸ್ಕಾರ ಮಾಡಿಸುತ್ತಾರೆ. ಅಷ್ಟೆಲ್ಲ ಮಾಡಿದರೂ ಕೂಡ ದೇವರು ನಮಗೆ ಮಕ್ಕಳ ಭಾಗ್ಯವನ್ನು ಕರುಣಿಸಲಿಲ್ಲ ಅಂತ ಬೇಸರಗೊಂಡು ದೇವರಿಗೆ ಇಡೀ ಶಾಪವನ್ನು ಹಾಕುತ್ತಾರೆ. ಇಲ್ಲೊಬ್ಬ ಪಾಪಿ ತಾಯಿ ಆಗಷ್ಟೆ ಹುಟ್ಟಿದ್ದ ತನ್ನ ಮಗುವನ್ನು ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ಹೊಸಕೋಟೆಯಲ್ಲಿ ನಡೆದಿದೆ.
ಒಂದು ಕಡೆ ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದೆ. ಜನರು ಮಳೆಯಲ್ಲಿ ಈಚೆ ಬರೋದು ಹೇಗೆ ಅಂತ ಮನೆಯಲ್ಲಿ ಕೂರುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಈ ಸಮಯವನ್ನೇ ಬಳಸಿಕೊಂಡ ಪಾಪಿ ತಾಯಿಯೊಬ್ಬಳು ತನ್ನ ಕರಳುಬಳ್ಳಿಯನ್ನೇ ಬ್ಯಾಗ್‌ನಲ್ಲಿ ಇಟ್ಟು ಹೊಸಕೋಟೆ ನಗರದ ಅಮಾನಿಕೆರೆಯ ಬಳಿ ಜಿಟಿಜಿಟಿ ಮಳೆಯಲ್ಲಿಯೇ ಎಸೆದು ಹೋಗಿದ್ದಾಳೆ.
ಇನ್ನು ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಮಗು ಅಳುವ ಶಬ್ದವನ್ನು ಕೇಳಿದ್ದಾರೆ. ಕೂಡಲೇ ಸುರಿವ ಮಳೆಯಲ್ಲಿ ಬಂದು ಅಳುತ್ತಿದ್ದ ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ಬ್ಯಾಗ್‌ನಲ್ಲಿದ್ದ ಮಗುವನ್ನು ರಕ್ಷಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಸದ್ಯ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಇನ್ನು ಮೂರು ದಿನಗಳ ಹಿಂದೆಯಷ್ಟೆ ಈ ಗಂಡು ಮಗು ಹುಟ್ಟಿದೆ ಎಂದು ತಿಳಿದುಬಂದಿದೆ. ನವಜಾತ ಮಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾಪಿ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.