ತುಮಕೂರು :
ಶ್ರೀ ರಾಜವೀರ ಮದಕರಿ ನಾಯಕರ ಸ್ಮಾರಕ ನಿರ್ಮಾಣದ ಬೇಡಿಕೆಗೆ ಬಲ ನೀಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ರಥಯಾತ್ರೆ ಇಂದು ತುಮಕೂರಿಗೆ ಆಗಮಿಸಿತ್ತು. ತುಮಕೂರಿನಲ್ಲಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ಲಭಿಸಿದೆ. ಕಲ್ಪತರು ನಾಡಾದ ತುಮಕೂರಿನಲ್ಲಿ ನಾಗರಕಟ್ಟೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರು ಹಾಗೂ ಸಮುದಾಯ ಮುಖಂಡರು ರಥಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು.
ಈ ವೇಳೆ ಸಮುದಾಯದ ಮುಖಂಡರು ಮಾತನಾಡಿ, ಮದಕರಿ ನಾಯಕರ ಜನ್ಮಭೂಮಿ ಜಾನಕಲ್ಲಿನಿಂದ ಹಿಡಿದು ಐಕ್ಯಭೂಮಿ ಶ್ರೀರಂಗ ಪಟ್ಟಣದವರೆಗೆ ಈ ರಥಯಾತ್ರೆ ನಡೆಯುತ್ತಿದೆ. ಈ ರಥಯಾತ್ರೆಯ ಉದ್ದೇಶ ಮದಕರಿ ನಾಯಕರಿಗೆ ನೈಜ ಗೌರವ ಸಲ್ಲಿಸುವಂತೆ ಸರ್ಕಾರ ವನ್ನು ಒತ್ತಾಯಿಸುವುದು. ಐಕ್ಯಭೂಮಿಯಾದ ಶ್ರೀರಂಗಪಟ್ಟಣದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂಬುದು ಸಮುದಾಯದ ಪ್ರಮುಖ ಬೇಡಿಕೆಯಾಗಿದೆ. ಇದೇ ಸಮಯದಲ್ಲಿ ತುಮಕೂರಿನ ನಾಗರಕಟ್ಟೆ ಸಮಾವೇಶಗೊಂಡ ಮುಖಂಡರು “ಕಟ್ಟುವೆವು ಕಟ್ಟುವೆವು, ಸ್ಮಾರಕ ಕಟ್ಟುವೆವು” ಎಂಬ ಘೋಷಣೆಗಳಿಂದ ಆಕ್ರೋಶ ವ್ಯಕ್ತಪಡಿಸಿದ್ರು. ಸಮುದಾಯ ಮುಖಂಡರು, "ರಾಜರನ್ನು ನಿರ್ಲಕ್ಷಿಸುವ ಸರಕಾರದ ನಡೆ ಖಂಡನೀಯ. ಮದಕರಿ ನಾಯಕರು ಈ ನಾಡಿನ ಸಿಂಹಸ್ವಪ್ನ. ಅವರ ಸ್ಮರಣಾರ್ಥ ಸ್ಮಾರಕ ಅವಶ್ಯಕ," ಎಂದು ಆಗ್ರಹಿಸಿದರು.
ಈ ವಿಚಾರದ ಬಗ್ಗೆ ಖ್ಯಾತ ಚಿತ್ರನಟ ಸಾಯಿಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದು, ರಾಜ ಮದಕರಿ ನಾಯಕರ ಸ್ಮಾರಕ ನಿರ್ಮಾಣ ಮಾಡಬೇಕೆನ್ನುವುದು ಪ್ರತಿಯೊಬ್ಬ ಕನ್ನಡಿಗರ ಬೇಡಿಕೆ , ಸ್ಮಾರಕ ನಿರ್ಮಾಣಕ್ಕೆ ಎಲ್ಲರೂ ಒಂದಾಗೋಣ ಎಂದಿದ್ದಾರೆ.
ಇನ್ನುರಥಯಾತ್ರೆಯು ಇದೆ 15ರಂದು ಶ್ರೀರಂಗಪಟ್ಟಣ ತಲುಪಲಿದ್ದು, ಸಮುದಾಯದ ಪರವಾಗಿ ಮದಕರಿ ನಾಯಕನ ಸ್ಮಾರಕ ನಿರ್ಮಾಣಕ್ಕೆ ಸರ್ಕಾರಕ್ಕೆ ತೀವ್ರ ಒತ್ತಡ ತರಲು ಮುಂದಾಗಿದ್ದಾರೆ.