ಮಂಗಳೂರು :
ಮೇ.1 ರಂದು ಫಾಝಿಲ್ ಕೊಲೆ ಆರೋಪಿ, ಹಿಂದೂ ಕಾರ್ಯಕರ್ತ 32 ವರ್ಷದ ಸುಹಾಸ್ ಶೆಟ್ಟಿ ಎಂಬಾತನನ್ನು ದುಷ್ಕರ್ಮಿಗಳ ತಂಡ ತಲವಾರಿನಿಂದ ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಲೆಗೈದಿತ್ತು. ಮಂಗಳೂರಿನ ಹೊರವಲಯದ ಬಜ್ಪೆ ಕಿನ್ನಿಪದವು ಎಂಬಲ್ಲಿ ನಡೆದ ಘಟನೆಗೆ ಜನ ಬೆಚ್ಚಿಬಿದ್ದಿದ್ದರು. ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡುತ್ತಿರುವ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತ ಬಜ್ಪೆ ಪೊಲೀಸರು ದುಷ್ಕರ್ಮಿಗಳ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಮೇ.3 ರಂದು ಕೊಲೆ ಆರೋಪಿಗಳಲ್ಲಿ 8 ಜನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಸದ್ಯ ಉಳಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಬಜ್ಪೆಯಲ್ಲಿ ನಡೆದಿದ್ದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಳಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕಳವಾರು ಗ್ರಾಮದ ಆಶ್ರಯ ಕಾಲೋನಿ ನಿವಾಸಿ 29 ವರ್ಷದ ಅಜರುದ್ದೀನ್, ಉಸ್ಮಾನಿಯಾ ಮಸೀದಿ ಬಳಿಯ ನಿವಾಸಿ 24 ವರ್ಷದ ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ ಹಾಗೂ ಬಂಟ್ವಾಳದ ಫರಂಗಿಪೇಟೆಯ ಕುಂಪನಮಜಲು ರಸ್ತೆ ನಿವಾಸಿ 39 ವರ್ಷದ ನೌಷಾದ್ ಬಂಧಿತ ಆರೋಪಿಗಳು.
ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎನ್ನಲಾಗಿದೆ. ಇವರ ಪೈಕಿ ಅಜರುದ್ದೀನ್ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದಿಬ್ಬರಾದ ಅಬ್ದುಲ್ ಖಾದರ್ ಮತ್ತು ನೌಷದ್ ಎಂಬುವವರನ್ನು ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆಯಂತೆ. ಪ್ರಕರಣದ ತನಿಖೆಯು ಮುಂದುವರೆದಿದ್ದು, ಇತರ ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.