ಮಧುಗಿರಿ:
ಮಧುಗಿರಿ ಭಕ್ತರಹಳ್ಳಿ ವೃತ್ತಕ್ಕೆ ಗ್ರಾಮ ಸಹಾಯಕನಾಗಿ ಆಯ್ಕೆಯಾಗಿದ್ದ ವ್ಯಕ್ತಿಯೇ ರೈತರ ಬೆಳೆ ವಿಮೆಯಲ್ಲಿ ಸರ್ಕಾರ ಹಾಗೂ ರೈತರಿಗೆ ವಂಚಿಸಿ ಸುಮಾರು 90 ಲಕ್ಷದಷ್ಟು ಪರಿಹಾರದ ಮೊತ್ತ ಕಬಳಿಸಿ ರಾಜೀನಾಮೆ ನೀಡಿದ್ದ. ಬಳಿಕ ರಾಜೀನಾಮೆ ನೀಡಿದ್ದ ವ್ಯಕ್ತಿಯನ್ನೇ ಮತ್ತೆ ಗ್ರಾಮ ಸಹಾಯಕ ಹುದ್ದೆಗೆ ಆದೇಶಿಸಿರುವ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಧುಗಿರಿ ಭಕ್ತರಹಳ್ಳಿ ವೃತ್ತಕ್ಕೆ 2019 ನವೆಂಬರ್ -19 ರಲ್ಲಿ ಕೊರಟಗೆರೆ ತಾಲೂಕಿನ ಕುರುಡಗಾನಹಳ್ಳಿ ವಾಸಿಯಾದ ಕೆ.ವಿ. ಯೋಗಾ ನರಸಿಂಹಯ್ಯ ಎಂಬಾತನನ್ನು ಗ್ರಾಮ ಸಹಾಯಕನಾಗಿ ಆಯ್ಕೆ ಮಾಡಲಾಗಿತ್ತು. ಇನ್ನು ಈ ಮೊದಲು 2014-15 ನೇ ಸಾಲಿನಲ್ಲಿ ಕೊಂಡವಾಡಿ ವೃತ್ತದಲ್ಲಿ ಗ್ರಾಮ ಸಹಾಯಕನಾಗಿ ಆಯ್ಕೆಯಾಗಿದ್ದು, ರೈತರ ಹೆಸರು ಸೂಚಿಸಿ ಬರೋಬ್ಬರಿ 90.69 ಲಕ್ಷ ಬೆಳೆ ವಿಮೆ ಪರಿಹಾರವನ್ನು ಪಡೆಯಲಾಗಿತ್ತು. ಭಕ್ತರಹಳ್ಳಿ ವೃತ್ತದ ನಾಗರೀಕರಾದ ಆತನ ಮಡದಿ, ಮಕ್ಕಳು, ಸಂಬಂಧಿಕರ ಹೆಸರಲ್ಲೇ ಕೊಂಡನಾಡಿ ವೃತ್ತವೆಂದು ತೋರಿಸಿ ವಿಮೆ ಹಣ ಪಡೆಯಲಾಗಿದೆ. ಈ ಬಗ್ಗೆ ತನಿಖೆಗೆ ಹೆದರಿ ಗ್ರಾಮ ಸಹಾಯಕನ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟಿದ್ದ. ಅಲ್ಲಿಂದ ಇಲ್ಲಿಯವರೆಗೂ ಸತತ 5 ವರ್ಷಗಳ ಕಾಲ ಹೈಕೋರ್ಟ್ ನಲ್ಲಿ ಈ ಬಗ್ಗೆ ತನಿಖೆ ನಡೆದು ಸ್ಥಳೀಯ ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಿ ವಿವಾದ ಇತ್ಯರ್ಥಕ್ಕೆ ಸೂಚಿಸಲಾಗಿತ್ತು.
ಆದರೆ ರೈತರ ಬೆಳೆ ವಿಮೆಯಲ್ಲಿ ಅಕ್ರಮ ನಡೆಸಿ ರಾಜೀನಾಮೆ ನೀಡಿದ್ದ ಯೋಗಾನರಸಿಂಹಯ್ಯನನ್ನು ಈಗಿನ ತಹಶೀಲ್ದಾರ್ ಮತ್ತೆ ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಈತನ ಮೇಲಿನ ಯಾವುದೇ ತನಿಖೆ ಹಾಗೂ ರಾಜೀನಾಮೆ ನೀಡಿದ್ದರ ಬಗ್ಗೆ ದಾಖಲೆಗಳಿದ್ದರೂ ಪರಿಶೀಲನೆ ನಡೆಸದೆ, ಹಾಲಿ ಕೆಲಸ ಮಾಡುತ್ತಿದ್ದ ರಾಮಕೃಷ್ಣ ಎಂಬಾತನನ್ನು ಮಾಹಿತಿ ನೀಡದೇ ತೆಗೆದುಹಾಕಲಾಗಿದೆ, ಕುಟುಂಬಕ್ಕೆ ಆಧಾರವಾಗಿದ್ದ ರಾಮಕೃಷ್ಣ ಅವರನ್ನು ತೆಗೆದು ಹಾಕಿದ್ದು ಲೂಟಿ ಹೊಡೆದವರನ್ನು ನೇಮಕ ಮಾಡಿದ್ದು, ಗ್ರಾಮಸ್ಥರು ಅಸಮಾಧಾನಗೊಂಡು ಗ್ರಾಮಸ್ಥರು ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕೂಡಲೇ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.