ಮಧುಗಿರಿ:
ಏಕಾಶಿಲಾ ಬೆಟ್ಟಕ್ಕೆ ಫುಲ್ ಫೇಮಸ್ ಆಗಿರೋ ಮಧುಗಿರಿ ಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಕನಸು ಕಾಣ್ತಾ ಇರೋ ಸಹಕಾರಿ ಸಚಿವ ರಾಜಣ್ಣ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಧುಗಿರಿ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಧುಗಿರಿ ಪಟ್ಟಣಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಧುಗಿರಿ ತಾಲೂಕು ಪಂಚಾಯತಿ ಮುಂಭಾಗ ಪುರಸಭೆ ವತಿಯಿಂದ ಸುಸಜ್ಜಿತವಾದ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ಈ ಶೌಚಾಲಯಕ್ಕೆ ಇದೀಗ ಬೀಗ ಜಡಿಯಲಾಗಿದ್ದು ಸಾರ್ವಜನಿಕರು ಮೂತ್ರವಿಸರ್ಜನೆಗೆ ಪರದಾಡುವಂತಾಗಿದೆ. ಇತ್ತ ಶಾಲಾ ಕಾಲೇಜು ಮಕ್ಕಳಿಗೆ ಅನುಕೂಲವಾಗಲೆಂದು ರಾಜೀವ್ ಗಾಂಧಿ ಕ್ರೀಡಾಂಗಣದ ಸಮೀಪದಲ್ಲಿ ಪುರಸಭೆ ವತಿಯಿಂದ ಶೌಚಾಲಯ ನಿರ್ಮಾಣ ಮಾಡಿದ್ದು, ಅದು ಬಳಕೆಗೆ ಯೋಗ್ಯವಾಗದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಇನ್ನು ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ ಅಧಿಕಾರಿಗಳನ್ನು ಎಚ್ಚರಿಸಿದ್ದರೂ ಕೂಡ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸ್ತಾ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕ ಶೌಚಾಲಯಗಳನ್ನು ಸಾರ್ವಜನಿಕರ ಸೇವೆಗೆ ಮುಕ್ತವನ್ನಾಗಿ ಮಾಡುತ್ತಾರಾ ಎಂದು ಕಾದುನೋಡಬೇಕಿದೆ.