ಮಧುಗಿರಿ:
ಮಧುಗಿರಿ ಜನರ ಆರಾಧ್ಯ ದೈವವಾದ ದಂಡಿನ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ದನಗಳ ಜಾತ್ರೆ ನಡೆಯುತ್ತಿದ್ದು, ದನಗಳ ಜಾತ್ರೆಗೆ ಹಳ್ಳಿಕಾರ್ ತಳಿಯ ದನಗಳು ಆಗಮಿಸಿದ್ದು, ಜಾತ್ರೆಗೆ ಮೆರಗು ತಂದಂತಾಗಿದೆ. ಅಲ್ಲದೇ ಜನರು ರೈತರನ್ನು ಹಳ್ಳಿಕಾರ್ ದನಗಳು ಸೆಳೆಯುತ್ತಿವೆ. ಈ ದನಗಳ ಜಾತ್ರೆಗೆ ಚಿತ್ರದುರ್ಗ, ಶಿರಾ, ಗೌರಿಬಿದನೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ನೆಲಮಂಗಲ, ಗುಬ್ಬಿ, ಅರಸೀಕೆರೆ, ಹಾವೇರಿ, ದಾವಣಗೆರೆ, ಹಿರಿಯೂರು ಸೇರಿದಂತೆ ಸೀಮಾಂಧ್ರ ಪ್ರದೇಶದ ಅನಂತಪುರ, ಹಿಂದೂಪುರ ಮತ್ತು ಮಡಕಶಿರಾ ತಾಲ್ಲೂಕುಗಳಿಂದ ರೈತರು ದನಗಳೊಂದಿಗೆ ಬಂದಿದ್ದಾರೆ. ಹಳ್ಳಿಕಾರ್ ತಳಿಯ ದನಗಳನ್ನು ನೋಡಿ ಜನರಂಥೂ ತುಂಬಾ ಆಕರ್ಷಣೀಯರಾಗಿದ್ದಾರೆ.
ಇನ್ನು ಜಾತ್ರೆಯಲ್ಲಿ 4 ಸಾವಿರಕ್ಕೂ ಹೆಚ್ಚು ಹಳ್ಳಿಕಾರ್ ಹಸುಗಳು ಬಂದಿದ್ದು, ದನಜಾತ್ರೆಗೆ ಬರುವ ರೈತರಿಗೆ ನೀರು, ಶೌಚಾಲಯ, ಶಾಮೀಯಾನ ಸೇರಿ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿತ್ತು. ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಹೋಬಳಿಯ ನಂದಿಹಳ್ಳಿ ಗ್ರಾಮದ ರೈತ ಅಶ್ವತ್ಥಪ್ಪ ಎಂಬುವರಿಗೆ ಸೇರಿದ ಜೋಡೆತ್ತುಗಳಿಗೆ 3 ಲಕ್ಷ ದರಕ್ಕೆ ಮಾರಾಟವಾಯಿತು. ಇನ್ನು ಈ ಬಾರಿಯ ಜಾತ್ರೆಯಲ್ಲಿ ನಮಗೆ ಅಷ್ಟು ಲಾಭ ಸಿಕ್ಕಿಲ್ಲ ಎಂದು ಕೆಲ ರೈತರು ನಿರಾಸೆಯಾದರು.
ಮಾರ್ಚ್ 11 ರಿಂದ 21 ರವರೆಗೆ ಮಧುಗಿರಿಯ ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ಜಾತ್ರೆ ನಡೆಯುತ್ತಿದೆ. ಆದರೆ ಜಾತ್ರೆಯ ಟೆಂಡರ್ ಎರಡನೇ ಬಾರಿ ಸ್ಥಗಿತಗೊಂಡಿದ್ದು, ಅಲ್ಪಾವಧಿ ಮರುಹರಾಜಿಗೆ ಯಾವ ಸವಾಲುದಾರರು ಮುಂದೆ ಬಾರದಿರೋದರಿಂದ ಸರ್ಕಾರದ ವತಿಯಿಂದಲೇ ಜಾತ್ರೆ ನಡೆಯುತ್ತದೆ. ಹರಾಜು ಪ್ರಕ್ರಿಯೆಗೆ ಬಂದಿದ್ದ ಎಲ್ಲಾ ಸವಾಲುದಾರರು ಠೇವಣಿಯನ್ನು ಕಟ್ಟದೆ, ಟೆಂಡರ್ ಕರೆಯುವುದು ಬೇಡ ಎಂದು ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ಮನವಿ ಪತ್ರವನ್ನು ನೀಡಿದರು.
ಈ ವೇಳೆ ಮಾತನಾಡಿದ ತಾಲೂಕು ಉಪವಿಭಾಗಾಧಿಕಾರಿ ಗೋಟುರು ಶಿವಪ್ಪ, ಪ್ರತಿ ವರ್ಷವೂ ಜಾತ್ರೆಯ ಟೆಂಡರ್ ಕರೆಯುತ್ತಿದ್ದು ಈ ಬಾರಿ ಟೆಂಡರ್ ಕರೆಯೋದು ಬೇಡ ಎನ್ನುವ ಮನವಿಯನ್ನು ಹರಾಜುದಾರರು ಕೊಟ್ಟಿದ್ದಾರೆ. ಟೆಂಡರ್ ದಾರರು ಅಗತ್ಯತೆಗಿಂತ ಹೆಚ್ಚಿನ ಸುಂಕ ವಸೂಲಿ ಮಾಡುತ್ತಾರೆ ಎಂದು ಟೆಂಡರ್ ಕರೆಯುವುದೇ ಬೇಡ ಸರ್ಕಾರದ ವತಿಯಿಂದಲೇ ವಸೂಲಿ ಮಾಡುವಂತಾಗಲಿ ಎಂದು ಮನವಿಯನ್ನು ಕೊಟ್ಟಿದ್ದಾರೆ ಎಂದು ಹೇಳಿದರು.