ಮಧುಗಿರಿ : ಮಲಗಲು ಆಗ್ತಿಲ್ಲ, ಊಟ ಮಾಡೋಕ್ಕಂಥೂ ಆಗ್ತಾನೆ ಇಲ್ಲ | ಆ ಗ್ರಾಮಕ್ಕಿರೋ ಸಮಸ್ಯೆ ಆದ್ರು ಏನು..?

ಮಧುಗಿರಿ:

ಇತ್ತೀಚಿನ ದಿನಗಳಲ್ಲಿ ನೊಣಗಳ ಸಂತತಿ ಕಡಿಮೆ ಆಗಿದ್ದು ಕಾಣ ಸಿಗುವುದು ಕಷ್ಟವಾಗಿದೆ. ಎಲ್ಲೋ ತಿಪ್ಪೆಗಳಲ್ಲಿ ಕೂರ್ತಿದ್ದ ನೊಣಗಳನ್ನು ಕಂಡರೆ ಜನರು ಅಸಹ್ಯ ಪಡುತ್ತಾರೆ. ಅಂತದರಲ್ಲಿ ಮನೆ ಮುಂದೆ ಸಾವಿರಾರು ನೊಣಗಳು ಮನೆಗಳ ಮುಂದೆ ನಿಲ್ಲಲಾಗದೇ, ಊಟ ಮಾಡಲು ಆಗದೇ ಹೈರಾಣಾಗಿದೆ.

ಬರಪೀಡಿತ ಪ್ರದೇಶವಾದ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗಡಿ ಗ್ರಾಮಗಳಾದ ಕಾಳೇನಹಳ್ಳಿ, ಎಂ ಹೊಸಹಳ್ಳಿ ಗ್ರಾಮಗಳಲ್ಲಿ ಸಾವಿರಾರು ನೊಣಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ. ಮಲಗಲು ಹೋದರೆ ಕಿವಿಯಲ್ಲಿ ಗುಯ್ ಗುಡುತ್ತವೆ, ಹಸಿವು ಎಂದು ಅನ್ನ ತಿನ್ನಲು ಹೋದರೆ ತಟ್ಟೆ ಮೇಲೆ ರಾಶಿ ರಾಶಿ ನೊಣಗಳು, ಹಾಲು ಕರೆಯಲು ಹೋದರೆ  ಅಲ್ಲೂ ನೊಣಗಳ ಕಾಟ ಇದರಿಂದ ಗ್ರಾಮವನ್ನೇ ತೊರೆಯುವಂತಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. 

ಇನ್ನು ಜಯಮಂಗಲಿ ಕೃಷ್ಣಮೃಗ ವನ್ಯಧಾಮಕ್ಕೆ ಹೊಂದಿಕೊಂಡಂತೆ ಪೌಲ್ಟ್ರಿ ಫಾರಂ ತಲೆ ಎತ್ತಿದೆ. ಇದರಿಂದಾಗಿ ಕಳೆದ ಮೂರು ತಿಂಗಳಿನಿಂದ ಕಾಳೇನಹಳ್ಳಿ, ಮೈದನ ಹೊಸಹಳ್ಳಿ ಗ್ರಾಮಗಳ ಸುತ್ತಮುತ್ತ ನೊಣಗಳ ಕಾಟ ವಿಪರೀತವಾಗಿದೆ. ಮನೆಗಳ ಮುಂದೆ, ತೋಟ, ಜಮೀನು ಬಳಿ, ಕುರಿ, ಮೇಕೆ, ಜಾನುವಾರು ಶೆಡ್ ಸೇರಿದಂತೆ ಎಲ್ಲೆಡೆ ನೊಣಗಳ ಕಾಟ ಹೆಚ್ಚಿದೆ. ಇದರಿಂದ ಮನೆಗಳಲ್ಲಿ ವಾಸ ಮಾಡಲು ಆಗ್ತಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಕಾಳೇನಹಳ್ಳಿ ಗ್ರಾಮಕ್ಕೆ ಬಂದಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಕಾಳೇನಹಳ್ಳಿ ಹಾಗೂ ಮೈದನಹೊಸಹಳ್ಳಿ ಗ್ರಾಮಸ್ಥರು ಈ ಬಗ್ಗೆ ಸಚಿವರ ಗಮನಕ್ಕೆ ತಂದಾಗ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕೋಳಿ ಫಾರಂ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದರು. ಆದರೂ ಕೂಡ ಪ್ರಯೋಜನ ಆಗ್ತಾ ಇಲ್ಲ ಎಂದು ದೂರುತ್ತಿದ್ದಾರೆ. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಶ್ರೀನಿವಾಸ್ ಪ್ರಸಾದ್ ಮತ್ತು ಚಿಕ್ಕಮಾಲೂರು ಪಿಡಿಒ ದೊಡ್ಡಯ್ಯಸ್ವಾಮಿಗೆ ದೂರು ನೀಡಿದ್ದು, ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿ, ಸಿಇಒ, ತಹಶೀಲ್ದಾರ್, ಇಒಗೆ ದೂರು ನೀಡಲಾಗುವುದು ಎಂದು ರೈತ ಕಾಳೇನಹಳ್ಳಿ ನಾರಾಯಣಗೌಡ ತಿಳಿಸಿದ್ದಾರೆ.

ಗ್ರಾಮದ ಸಮೀಪದಲ್ಲೇ ಮೈದನಹಳ್ಳಿಯ ಜಯಮಂಗಲಿ ಕೃಷ್ಣಮೃಗ ವನ್ಯಧಾಮವಿದ್ದು, ಅಧಿಕಾರಿಗಳು ವನ್ಯಧಾಮದ ಸಮೀಪದಲ್ಲೇ ಕೋಳಿ ಫಾರಂ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಇದರಿಂದ ನೋಣಗಳ ಕಾಟ ಹೆಚ್ಚಾಗಿದೆ ಅಲ್ಲದೆ ವನ್ಯಧಾಮದ ಪ್ರಾಣಿ ಪಕ್ಷಿಗಳು ನಾಶವಾಗಲು ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ನೊಣಗಳ ಕಾಟಕ್ಕೆ ಗ್ರಾಮಗಳ ಜನರು ಬೇಸತ್ತಿದ್ದು, ಇನ್ನಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಗಳಿಂದ ಜನರು ತೊರೆಯುವುದಂತೂ ಶತಸಿದ್ಧವಾಗಿದೆ.

Author:

...
Editor

ManyaSoft Admin

share
No Reviews