ಶಿರಾ :
ಶಿರಾ ತಾಲೂಕಿನ ಎರಡು ಕಡೆ ನಿನ್ನೆ ರಾತ್ರಿ ಸಿಡಿಲಿನ ಅಬ್ಬರಕ್ಕೆ ಭಾರೀ ಅವಘಡಗಳು ಸಂಭವಿಸಿವೆ. ಯರದಕಟ್ಟೆ ಗ್ರಾಮದಲ್ಲಿ ಸಿಡಿಲಿಗೆ ಗುಡಿಸಲು ಭಸ್ಮವಾದ್ರೆ. ಬಿದರಕೆರೆಯಲ್ಲಿ ಸಿಡಿಲು ಬಡಿದ ಪರಿಣಾಮ ಎಮ್ಮೆಯೊಂದು ಸಾವನ್ನಪ್ಪಿದೆ.
ಶಿರಾ ತಾಲೂಕಿನ ನಿನ್ನೆ ರಾತ್ರಿ ಯರದಕಟ್ಟೆ ಗ್ರಾಮದ ಹೊರವಲಯದ ಜಮೀನಿನಲ್ಲಿ ನಟರಾಜು ಎಂಬುವವರಿಗೆ ಸೇರಿದ ಗುಡಿಸಲಿಗೆ ಏಕಾಏಕಿ ಸಿಡಿಲು ಬಡಿದಿದ್ದು, ಗುಡಿಸಲು ಸುಟ್ಟು ಭಸ್ಮವಾಗಿದೆ. ಅಲ್ದೇ ಗುಡಿಸಲಲ್ಲಿ ಇದ್ದ ದಿನಸಿ ವಸ್ತುಗಳು, ಮನೆ, ಟ್ರ್ಯಾಕ್ಟರ್ ಕಂತು ಕಟ್ಟಲು ಕೂಡಿಟ್ಟಿದ್ದ ಸುಮಾರು ಮೂರು ಲಕ್ಷ ಹಣ, ಮೊಬೈಲ್ ಸುಟ್ಟುಕರಕಲಾದ್ರೆ, ಒಂದು ಹಸು ಮತ್ತು ಕರುವಿಗೆ ಸುಟ್ಟಗಾಯಗಳಾಗಿವೆ. ಮಳೆ ಬರ್ತಾ ಇದ್ದರಿಂದ ಕಡಲೆಬಳ್ಳಿ ಬಣವೆಗೆ ಟಾರ್ಪಲ್ ಹಾಕಲು ಗುಡಿಸಲಿನಿಂದ ಹೊರಗಡೆ ಬಂದಾಗ ಸಿಡಿಲು ಬಡಿದಿದ್ದು, ಅದೃಷ್ಟವಶಾತ್ ಗುಡಿಸಿಲಿನಲ್ಲಿದ್ದ ಆರೇಳು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇತ್ತ ಶಿರಾ ತಾಲೂಕಿನ ಬಿದರ ಕೆರೆ ಗ್ರಾಮವಾಸಿ ಶಿವಲಿಂಗಪ್ಪರಿಗೆ ಸೇರಿದ ಎಮ್ಮೆಗೂ ಕೂಡ ಸಿಡಿಲು ಬಡಿದಿದ್ದು, ಸಿಡಿಲಿನ ಹೊಡೆತಕ್ಕೆ ಎಮ್ಮೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಮನೆಗೆ ಆಧಾರವಾಗಿದ್ದ ಎಮ್ಮೆಯನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ. ಸಿಡಿಲು ಬಡಿದು ಹಾನಿಯಾದ ಸ್ಥಳಗಳಿಗೆ ಗ್ರಾಮ ಲೆಕ್ಕಾಧಿಕಾರಿ ಲತಾ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.