ಶಿರಾ:
ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಹನಿಟ್ರ್ಯಾಪ್ನಲ್ಲಿ ಯಾರು ಸಿಲುಕಿದ್ದಾರೆ ಯಾರ ಬಳಿ ಹನಿ ಇದೆ ಒಟ್ಟಿನಲ್ಲಿ ಇಡೀ ಸರ್ಕಾರವೇ ಹನಿಟ್ರ್ಯಾಪ್ ಆಗಿದ್ದು, ದೇಶದಲ್ಲಿ ಇನ್ನು ಏನು ಇದ್ದರೂ ಕಾಂಗ್ರೆಸ್ ಮುಕ್ತವಾಗುವ ದಿನಗಳು ದೂರವಿಲ್ಲ ಎಂದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಬೇರೆ ಬೇರೆ ವಿಚಾರಗಳನ್ನು ಮುನ್ನಲೆಗೆ ತರುತ್ತಿದೆ. ಅಭಿವೃದ್ಧಿ ಕೆಲಸ ಮಾಡಿ ಪ್ರಚಾರ ಪಡೆಯಲು ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ 5 ವರ್ಷ ಪೂರೈಸಲು ಹೊರಟಿದೆ. ಇಂತಹ ದುರ್ಬಲ ಮುಖ್ಯಮಂತ್ರಿಯನ್ನು ನಾನು ಕಂಡೇ ಇಲ್ಲ, ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ ರಾಜ್ಯದ ಹಿತವನ್ನು ಬಲಿಕೊಟ್ಟಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ದುರ್ಬಲಗೊಳಿಸಲು ಸರ್ಕಾರ ಮುಂದಾಗಿದೆ. ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಲ್ಲಿನ ₹39 ಸಾವಿರ ಕೋಟಿಯನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಕಾಂಗ್ರೆಸ್ ಮೇಲಿನ ಅತಿಯಾದ ವ್ಯಾಮೋಹದಿಂದಾಗಿ ಯಾರು ಸಹ ಇದನ್ನು ಪ್ರಶ್ನೆ ಮಾಡುತ್ತಿಲ್ಲ. ಇದರಿಂದಾಗಿ ದಲಿತರಿಗೆ ಅನ್ಯಾಯವಾಗುವುದೇ ಹೊರತು ಸರ್ಕಾರಕ್ಕೆ ಯಾವುದೇ ನಷ್ಟ ಇಲ್ಲ. ಕಾಂಗ್ರೆಸ್ ಪಕ್ಷ ದಲಿತರು, ಮುಸ್ಲಿಮರು, ಹಿಂದುಳಿದವರು ಸೇರಿದಂತೆ ಯಾರನ್ನು ಬೆಳೆಯಲು ಬಿಡುವುದಿಲ್ಲ ಎಂದು ಆರೋಪಿಸಿದರು.