ಕುಣಿಗಲ್‌ : ಮಗನಿಂದಲೇ ತಂದೆಯ ಹತ್ಯೆ..! ಮಗನ ನೀಚ ಕೃತ್ಯ ಸಿಸಿ ಕ್ಯಾಮರಾದಲ್ಲಿ ಬಯಲು

ಕೊಲೆಯಾದ ವ್ಯಕ್ತಿ ನಾಗೇಶ್
ಕೊಲೆಯಾದ ವ್ಯಕ್ತಿ ನಾಗೇಶ್
ತುಮಕೂರು

ಕುಣಿಗಲ್‌ :

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆ ಆದರೆ ಕೆಟ್ಟ ತಂದೆ- ತಾಯಿ ಇರಲ್ಲ ಅಂತಾರೇ. ಆದರೆ ತಾನು ಕೆಟ್ಟ ಮಗ ಅಂತಾ ಇಲ್ಲೋಬ್ಬ ಪಾಪಿ ಪುತ್ರ ಸಾಬೀತು ಪಡಿಸಿ ತೋರಿಸಿದ್ದಾನೆ. ಮಗನೇ ತಂದೆಯ ಪಾಲಿಗೆ ಯಮನಾಗಿದ್ದು, ಸ್ನೇಹಿತರ ಜೊತೆ ಸೇರಿ ಅಪ್ಪನನ್ನೇ ಮುಗಿಸಿದ್ದಾನೆ. ಹೆತ್ತ ತಂದೆಯನ್ನು ಪರಲೋಕಕ್ಕೆ ಕಳುಹಿಸಿ ಅಮಾಯಕನಂತಿದ್ದ ಮಗನ ನೀಚ ಕೃತ್ಯವನ್ನು ಸಿಸಿ ಕ್ಯಾಮರಾ ಬಯಲು ಮಾಡಿದೆ. ಹೆತ್ತಪ್ಪನನ್ನೇ ಮಗನೊಬ್ಬ ಕೊಂದ ಘಟನೆಗೆ ಕುಣಿಗಲ್‌ ನಗರದ ಜನ ಬೆಚ್ಚಿಬಿದ್ದಿದ್ದಾರೆ. ಇತ್ತ ಅಪ್ಪ ಸಾವಿನ ಮನೆ ಸೇರಿದರೆ, ತಾನು ಮಾಡಿದ ತಪ್ಪಿಗೆ ಮಗ ಜೈಲು ಪಾಲಾಗಿದ್ದಾನೆ.

ತಿಮ್ಮಸಂದ್ರದ ನಾಗೇಶ್ ಎಂಬಾತ ಹಲವು ವರ್ಷಗಳಿಂದ ಕುಣಿಗಲ್ ನ ಶಿವಾಜಿಟೆಂಟ್ ರಸ್ತೆಯಲ್ಲಿ ವಾಸವಿದ್ದ. ಇದೇ ರಸ್ತೆಯಲ್ಲಿ ತನ್ನದೇ ಐಸ್ ಕ್ರೀಂ ಫ್ಯಾಕ್ಟರಿ ತೆರೆದಿದ್ದ ಆತ ತಾನಾಯ್ತು ತನ್ನ ವ್ಯವಹಾರವಾಯ್ತು ಅಂತ ಜೀವನ ಸಾಗಿಸುತಿದ್ದ. ಆದರೆ ಹೀಗಿದ್ದ ಈತ ಮೇ 10ರಂದು ಅನುಮಾನಸ್ಪದವಾಗಿ ಸಾವನಪ್ಪಿದ್ದ. ಮೊದಲಿಗೆ ಆತ ಕರೆಂಟ್ ಶಾಕ್ ನಿಂದ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ ಫ್ಯಾಕ್ಟರಿಯ ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಅಸಲಿ ಸಂಗತಿಯೊಂದು ಬಯಲಾಗಿದ್ದು, ಆತನ ಮಗ ಹಾಗೂ ಸ್ನೇಹಿತರಿಂದಲೇ ನಾಗೇಶ್ ಕೊಲೆಯಾಗಿರೊದು ಬಯಲಾಗಿದೆ.

ನಾಗೇಶ್ ತನ್ನ ಊರು ಬಿಟ್ಟು ಹಲವು ವರ್ಷವೇ ಕಳೆದಿದೆ. ಪತ್ನಿ ಊರಿನಲ್ಲೇ ಇದ್ದು, ಪಿಯುಸಿ ಓದುತಿದ್ದ ಮಗ ಸೂರ್ಯ ಹಾಗೂ ಶಾಲೆಗೆ ಹೋಗುತ್ತಿದ್ದ ಮಗಳ ಜೊತೆ ವಾಸವಿದ್ದರು. ಮೇ 10 ರಂದು ರಾತ್ರಿ ಐಸ್‌ಕ್ರೀ ಫ್ಯಾಕ್ಟರಿಯಲ್ಲೇ ತಂದೆ ನಾಗೇಶ್‌ ಮಲಗಿದ್ದರು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಫ್ಯಾಕ್ಟರಿಗೆ ಬಂದ ಮಗ ಸೂರ್ಯ ಹಾಗೂ ಆತನ ಸ್ನೇಹಿತ ಧನುಶ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ತಂದೆ ನಾಗೇಶ್‌ ಪಾಪಿ ಮಗ ಹಾಗೂ ಆತನ ಸ್ನೇಹಿತನಿಗೆ ಕೋಲಿನಿಂದಲೂ ಹೊಡೆದಿದ್ದಾರೆ. ಕೊಲೆ ಮಾಡಲೆಂದೇ ಸ್ಕೇಚ್‌ ಹಾಕಿಕೊಂಡು ಬಂದಿದ್ದ ಮಗ ಸೂರ್ಯ ಏಕಾಏಕಿ ತಂದೆ ನಾಗೇಶ್‌ ಕುತ್ತಿಗೆಗೆ ಬಟ್ಟೆಯಿಂದ ಜೀರಿ ನೆಲಕ್ಕುರುಳಿಸಿ ಸಾಯಿಸಿದ್ದಾರೆ. ಬಳಿಕ ತಂದೆ ನಾಗೇಶ್‌ನನ್ನು ಮಲಗುವ ಜಾಗಕ್ಕೆ ಕರೆದೊಯ್ದು ಮಲಗಿಸಿದ್ದಾರೆ. ಕೊಲೆಯನ್ನು ಡೈವರ್ಟ್‌ ಮಾಡಲೆಂದು ತಂದೆಯ ಬೆರಳಿಗೆ ಕರೆಂಟ್‌ ಶಾಕ್‌ ಕೂಡ ಹೊಡೆಸಿ, ಹೆತ್ತಪ್ಪನದ್ದು ಸಹಜ ಸಾವು ಎಂದು ಪಾಪಿ ಮಗ ಸೂರ್ಯ ಬಿಂಬಿಸಿದ್ದಾನೆ.  

ಇನ್ನು ತಂದೆ ನಾಗೇಶ್‌ ಸಾವಿನ ಬಗ್ಗೆ ಮಗಳು ಸವಿತಾ ಕುಣಿಗಲ್‌ ಪೊಲೀಸ್‌ ಠಾಣೆಗೆ ದೂರನ್ನು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಐಸ್‌ಕ್ರೀಂ ಫ್ಯಾಕ್ಟರಿಯಲ್ಲಿದ್ದ ಸಿಸಿ ಕ್ಯಾಮರಾ ಡಿವಿಆರ್‌ನನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಐಸ್‌ಕ್ರೀಂ ಮಾಲೀಕ ನಾಗೇಶ್‌ ಸಾವು ಸಹಜ ಸಾವು ಅಲ್ಲ, ಅದು ಕೊಲೆ ಎಂಬುದು ಬಯಲಾಗಿದೆ. ಕೂಡಲೇ ಅಲರ್ಟ್‌ ಆದ ಪೊಲೀಸರು ಕಿರಾತಕ ಮಗನಿಗಾಗಿ ಹುಡುಕಾಟ ನಡೆಸಿದ್ದು, ತಂದೆಯನ್ನು ಕೊಂದು ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ತಲೆಮರೆಸಿಕೊಂಡಿದ್ದ ಸೂರ್ಯ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ತಂದೆಯನ್ನು ಕೊಲೆ ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಇನ್ನು ಹುಡುಗಿ ವಿಚಾರಕ್ಕೆ ಮಗ ಸೂರ್ಯ ತನ್ನ ಸ್ನೇಹಿತ ಧನುಶ್‌ ಜೊತೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ದೇ ನಾಗೇಶ್‌ ತಮ್ಮ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡ್ತಾ ಇದ್ದರು ಎಂದು ಕೇಳಿ ಬರ್ತಿದ್ದು, ಹೀಗಾಗಿ ಕೊಲೆ ಮಾಡಿದರಾ ಎಂಬ ಅನುಮಾನ ಕೂಡ ವ್ಯಕ್ತವಾಗ್ತಿದೆ. ಇತ್ತ ಕೆಲ ಮೂಲಗಳ ಪ್ರಕಾರ ಆಸ್ತಿ ವಿಚಾರವಾಗಿ ನಡೆದ ಕಲಹದಿಂದ ತಂದೆಯನ್ನು ಕೊಂದಿದ್ದಾನೆ ಎಂದು ಹೇಳಲಾಗ್ತಿದ್ದು, ಪೊಲೀಸರ ತನಿಖೆಯಲ್ಲಿ ಕೊಲೆಯ ಸತ್ಯಾಸತ್ಯತೆ ಬಯಲಾಗಬೇಕಿದೆ.

ಅಪೋಲೋ ಐಸ್ ಕ್ರೀಂ ಫ್ಯಾಕ್ಟರಿ ಮಾಲೀಕ ನಾಗೇಶ್‌ನನ್ನು ಕೊಲೆ ನಡೆದ 15 ದಿನಗಳ ಹಿಂದೆಯೇ ಹುಲಿಯೂರು ದುರ್ಗ ಮಾರ್ಗದಲ್ಲಿ ಕಾರಿಗೆ ಡಿಕ್ಕಿ ಹೊಡೆದು, ಗಲಾಟೆ ಮಾಡಿ ಕೊಲೆ ಮಾಡಲು ಪ್ಲಾನ್‌ ಮಾಡಲಾಗಿತ್ತಂತೆ. ತಂದೆ ನಾಗೇಶ್‌ ಕೊಲೆ ಸಂಬಂಧ ಮಗ ಸೂರ್ಯ, ಸ್ನೇಹಿತರಾದ ಮನು, ಮೂರ್ತಿ, ಲಿಖಿತ್, ಗಂಗಾಧರ್ ಗೌಡ, ಉಲ್ಲಾಸ್  ಸೇರಿ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಈ ಸಂಬಂಧ ಕುಣಿಗಲ್‌ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

 

Author:

...
Sushmitha N

Copy Editor

prajashakthi tv

share
No Reviews