ಕೊರಟಗೆರೆ :
ಮಾನವನ ದುರಾಸೆಯಿಂದಾಗಿ ಇಂದು ಕಾಡು ನಾಶವಾಗುತ್ತಿದೆ. ಇದರಿಂದ ಅಲ್ಲಿ ಜೀವಿಸುವಂತ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಎದುರಾಗ್ತಿದೆ. ಈ ಕಾರಣಕ್ಕೆ ಹಲವು ಪ್ರಾಣಿಗಳು ನಾಡಿನತ್ತ ಆಹಾರ ಹರಸುತ್ತ ಬರುತ್ತಿವೆ. ಇಂತಹ ವೇಳೆಯಲ್ಲಿ ಕೆಲವೊಮ್ಮೆ ಬಸ್, ಕಾರುಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಮತ್ತೊಂದು ಕಡೆ ಗ್ರಾಮಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿವೆ. ಇವೆಲ್ಲದರ ನಡುವೆ ಅವುಗಳಲ್ಲಿಯೇ ಆಹಾರಕ್ಕಾಗಿ ಕಿತ್ತಾಟವಾಗಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಕೊಲ್ಲುತ್ತಿವೆ. ಎರಡು ಚಿರತೆಗಳ ಕಾದಾಟದಲ್ಲಿ ಒಂದು ವರ್ಷದ ಹೆಣ್ಣು ಚಿರತೆ ಸಾವಪ್ಪನ್ನಪಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಸಿಎನ್ ದುರ್ಗ ಹೋಬಳಿಯ ಕುರಂಕೋಟೆ ಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದ ಹೊರವಲಯದ ರಸ್ತೆ ಬದಿಯ ಮಾವಿನ ತೋಟದಲ್ಲಿ ಚಿರತೆ ಸಾವನ್ನಪ್ಪಿದೆ. ಸತ್ತಿರುವ ಚಿರತೆ ಕಂಡ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಸುದ್ದಿ ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಾದ ದಿಲೀಪ್ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಈ ಚಿರತೆಗಳು ನಗರದತ್ತ ಬರುತ್ತಿರುವುದಕ್ಕೆ ಇಲ್ಲಿ ನಡೆಯುತ್ತಿರುವ ಕ್ರಷರ್ ಗಳ ಬ್ಲಾಸ್ಟ್‌ಗಳೇ ಕಾರಣ ಅಂತ ಗ್ರಾಮಸ್ಥರು ಆರೋಪಿಸಿದರು. ಚಿರತೆಗಳ ಕಾದಾಟದಿಂದಲೇ ಈ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಇನ್ನು ಚಿರತೆಯ ಮರಣೋತ್ತರ ಪರೀಕ್ಷೆ ನಂತರವಷ್ಟೆ ಚಿರತೆಯ ಸಾವಿನ ಬಗ್ಗೆ ತಿಳಿಯುತ್ತದೆ ಎನ್ನಲಾಗಿದೆ.