ಕೊರಟಗೆರೆ:
ಕೊರಟಗೆರೆ ತಾಲೂಕಿನ ಕರಡಿಧಾಮ ಮೀಸಲು ಅರಣ್ಯ ಹಾಗೂ ಹಿರೇಬೆಟ್ಟ ರಕ್ಷಿತ ಅರಣ್ಯದಲ್ಲಿ ಮತ್ತೆ ಕಲ್ಲುಕ್ವಾರೆ ಬ್ಲಾಸ್ಟಿಂಗ್ ಸದ್ದು ಶುರುವಾಗಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿದ್ದ ಪ್ರಾಣಿ ಪಕ್ಷಿಗಳಿಗೆ ಹಾಗೂ ಸ್ಥಳೀಯ ರೈತರು ಹಾಗೂ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಹೌದು ಸುಮಾರು 15 ವರ್ಷದಿಂದ ಗೌರಿಕಲ್ಲು ಕಲ್ಲು ಕ್ವಾರೆಯಲ್ಲಿ ಸ್ಥಗಿತವಾಗಿದ್ದ ಕ್ರಷರ್ ನಿರ್ಮಾಣಕ್ಕೆ ಗಣಿ ಇಲಾಖೆ ಮರು ಜೀವ ಕೊಟ್ಟಿದ್ದು ಮತ್ತಷ್ಡು ಸಂಘರ್ಷಕ್ಕೆ ದಾರಿ ಮಾಡಿ ಕೊಟ್ಟಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಗ್ರಾಮ ಪಂಚಾಯ್ತಿಯ ಗೌರಿಕಲ್ಲು ಗ್ರಾಮದ ಕಲ್ಲು ಕ್ವಾರೆಯ ಪೂರ್ವಕ್ಕೆ ಕರಡಿಧಾಮ ಮೀಸಲು ಅರಣ್ಯ ಪ್ರದೇಶ ಇದ್ದರೆ, ಪಶ್ಚಿಮಕ್ಕೆ ಹಿರೇಬೆಟ್ಟ ರಕ್ಷಿತ ಅರಣ್ಯ ಪ್ರದೇಶ ಇದ್ದರೂ ಕೂಡ ಅಧಿಕಾರಿಗಳು, ಗಣಿ ಇಲಾಖೆ ಸ್ಥಳಕ್ಕೆ ಭೇಟಿ ನೀಡದೇ ಅಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ನೀಡಿದೆ. ಗೌರಿಕಲ್ಲು, ದೊಗ್ಗನಹಳ್ಳಿ, ಮಲ್ಲೇಕಾವು, ಗೊಲ್ಲರಹಟ್ಟಿ, ಗೋಂದಿಹಳ್ಳಿ ಮತ್ತು ವಿರೋಬನಹಳ್ಳಿಯ ಅಕ್ಕಪಕ್ಕದ ನೂರಾರು ರೈತರ ಜಮೀನುಗಳಿವೆ. ರೈತರ ಜಮೀನುಗಳ ಬಳಿಯೇ ಕಲ್ಲುಕ್ವಾರೆ ಪ್ರಾರಂಭವಾದರೇ ಬಂಡೆ ಶಬ್ದದ ಜೊತೆ ಕ್ರಷರ್ ಧೂಳಿನಿಂದ ಬೆಳೆಗಳಿಗೆ ಹಾನಿಯ ಜೊತೆ ದುಡಿದು ತಿನ್ನುವ ಕಾರ್ಮಿಕರಿಗೆ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಬೆಂಡೋಣಿಯ ಕಲ್ಲುಗಣಿಕೆ ಗುತ್ತಿಗೆದಾರ ಬಿ.ಆರ್.ಜಯರಾಮ್ಗೆ 2011 ರಲ್ಲೇ ಗೌರಿಕಲ್ಲು ಗ್ರಾಮದ ಕಲ್ಲು ಕ್ವಾರೆಯಲ್ಲಿ ಎಸ್.ಜೆ.ಸ್ಟೋನ್ ಕ್ರಷರ್ ಸ್ಥಾಪನೆಗೆ ೩೦ವರ್ಷಗಳ ಕಾಲ ಗುತ್ತಿಗೆ ನೀಡಿ ತುಮಕೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶ ಮಾಡಿತ್ತು. ಇದರಿಂದ ಬಂಡೆಗಾಗಿ ಗುತ್ತಿಗೆದಾರ ಜಯರಾಮ್ ಮತ್ತು ಬಂಡೆ ಕಾರ್ಮಿಕರ ನಡುವೆ ಕಳೆದ 15 ವರ್ಷದಿಂದ ಸಂಘರ್ಷ ನಡೆಯುತ್ತಿದೆ. 2012ರಲ್ಲೂ ಕೂಡ ಕ್ರಷರ್ ಸ್ಥಾಪನೆಯಾದ ವೇಳೆ ಕಾರ್ಮಿಕರಿಂದ ವಿರೋಧ ವ್ಯಕ್ತವಾಗಿದ್ದು, ಅಂದಿನ ಡಿಸಿ ಕ್ರಷರ್ ಸ್ಥಗಿತ ಮಾಡಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೀಗ ಮತ್ತೆ ಕ್ರಷರ್ ಹಾಗೂ ಕಲ್ಲು ಗಣಿಗಾರಿಕೆ ಮತ್ತೆ ಮುನ್ನಲೆಗೆ ಬಂದಿದ್ದು ಕಾರ್ಮಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಕರಡಿಧಾಮ ಮತ್ತು ಹಿರೇಬೆಟ್ಟ ಮೀಸಲು ಅರಣ್ಯದ ಮಧ್ಯೆ ನಿರ್ಮಾಣ ಆಗುತ್ತಿರುವ ಗಣಿಗಾರಿಕೆ ಮತ್ತು ಕ್ರಷರ್ ಘಟಕದಿಂದ ಕಾಡಿನಲ್ಲಿ ವಾಸಿಸುವ ಪ್ರಾಣಿ ಮತ್ತು ಪಕ್ಷಿಗಳಿಗೆ ಸಂಕಷ್ಟ ಎದುರಾಗಲಿದೆ. ಈಗಾಗಲೇ ಕಾಡುಪ್ರಾಣಿಗಳ ಹಾವಳಿಯಿಂದ ನಲುಗಿರುವ ಕಾಡಂಚಿನ ರೈತರಿಗೆ ಮತ್ತೇ ಪ್ರಾಣಿಗಳ ದಾಳಿಯು ತಪ್ಪಿದಲ್ಲ. ಹೀಗಾಗಿ ತಕ್ಷಣ ಸಂಬಂಧಪಟ್ಟ ಅರಣ್ಯ ಇಲಾಖೆ ಇವರಿಗೆ ಕೊಟ್ಟಿರೋ ಅನುಮತಿಯನ್ನು ರದ್ದು ಮಾಡಬೇಕಿದೆ ಎಂದು ಆಗ್ರಹಿಸಿದರು.
ಹಿರೇಬೆಟ್ಟ ಮೀಸಲು ಅರಣ್ಯದ ಗಡಿಯನ್ನೇ ಮುಚ್ಚಿ ಗಣಿಗಾರಿಕೆಯ ಲಾರಿ ಸಂಚಾರಕ್ಕೆ ದಾರಿ ಮಾಡಲಾಗಿದೆ. ಇದರ ಜೊತೆಯಲ್ಲಿ ಕೃಷಿಭೂಮಿಗೆ ಕೊಳವೆಬಾವಿ ಮತ್ತು ವಿದ್ಯುತ್ ಸಂಪರ್ಕ ಹಾಕಿಸಿಕೊಂಡು ಕ್ರಷರ್ ಘಟಕ ನಿರ್ಮಾಣಕ್ಕೆ ದುರ್ಬಳಕೆ ಮಾಡಿಕೊಂಡಿದೆ ಎಂದು ಆಕ್ರೋಶ ಕೇಳಿಬಂದಿದೆ. ಬೆಸ್ಕಾಂ ಮತ್ತು ಗ್ರಾಪಂ ಅಧಿಕಾರಿಗಳ ಪರೋಕ್ಷ ಬೆಂಬಲವೇ ಗುತ್ತಿಗೆದಾರನಿಗೆ ಶಕ್ತಿಯಾಗಿ ಬಡಕಾರ್ಮಿಕರ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ.
ಇದಲ್ಲದೇ ಕ್ರಷರ್ ನಿರ್ಮಾಣದ ಬಳಿ ವಿಡೀಯೊ ಚಿತ್ರೀಕರಣ ಮಾಡಿದ ಪತ್ರಕರ್ತರನ್ನು ತಡೆದು ವಿಡೀಯೊ ಮಾಡಲು ನಮ್ಮ ಅನುಮತಿ ಪಡೆಯಿರಿ. ಪತ್ರಕರ್ತರ ಐಡಿ ಕಾರ್ಡ್ ತೋರಿಸುವಂತೆ ಪೀಡಿಸಿದ್ದು, ಪತ್ರಕರ್ತರ ಮೇಲೆ ಜಯರಾಮ್ನ ಬೆಂಬಲಿಗರು ಗುಂಡಾಗಿರಿ ನಡೆಸಿದ್ದಾರೆ.