ಕೊರಟಗೆರೆ :
ಬೆಸ್ಕಾಂ ಇಲಾಖೆ ದಿವಾಳಿ ಆಯ್ತಾ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯಿಂದಾಗಿ ತನ್ನ ಸುಪರ್ದಿಗೆ ಬರುವ ಇಲಾಖೆಯನ್ನೇ ದಿವಾಳಿಯಾಗುವಂತೆ ಮಾಡಿದ್ಯಾ ಎಂಬ ಅನುಮಾನ ಮೂಡಿದೆ. ಇದರಿಂದ ಬೆಸ್ಕಾಂ ಸಿಬ್ಬಂದಿಯ ಜೀವಕ್ಕೆ ಬೇಕಾದ ಕನಿಷ್ಠ ಸೌಲಭ್ಯವನ್ನು ಒದಗಿಸ್ತಾ ಇಲ್ವಾ ಅನ್ನೋ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕವಾಗುವಂತೆ ಕೊರಟಗೆರೆ ತಾಲೂಕಿನಲ್ಲಿ ಒಂದು ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮ ಪಂಚಾಯ್ತಿಯ ಮಲ್ಲೇಶಪುರ ಕ್ರಾಸ್ ಬಳಿ ಬೆಸ್ಕಾಂ ಸಿಬ್ಬಂದಿ ಅಪಾಯದಲ್ಲೇ ಕೆಲಸ ಮಾಡಿರೋ ಪ್ರಸಂಗ ಬೆಳಕಿಗೆ ಬಂದಿದೆ. ಲೈನ್ ಕೆಳಗೆ ಇರೋ ಮರದ ಕೊಂಬೆಗಳನ್ನು ಯಾವುದೇ ಭದ್ರತೆ ಇಲ್ಲದೇ ಸಿಬ್ಬಂದಿ ಕಟ್ ಮಾಡಿದ್ದಾರೆ. ಬೆಸ್ಕಾಂ ಸಿಬ್ಬಂದಿಗೆ ಭದ್ರತೆ ಇರುವ ವಾಹನ ಹಾಗೂ ಉಪಕರಣ ನೀಡದಿರೋದರಿಂದ ಏಣಿಯನ್ನು ಸುಮಾರು ಆರರಿಂದ ಏಳು ಮಂದಿ ಸಿಬ್ಬಂದಿ ಹಿಡಿದುಕೊಂಡರೆ, ಓರ್ವ ಸಿಬ್ಬಂದಿ ಏಣಿ ಹತ್ತಿ ಮರವನ್ನು ಕತ್ತರಿಸಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕರೆಂಟ್ ವೈರ್ ಏನಾದರೂ ಟಚ್ ಆಗಿದಿದ್ದರೆ ಕೆಲಸ ಮಾಡ್ತಾ ಇದ್ದ ಎಲ್ಲಾ ಸಿಬ್ಬಂದಿಯ ಪ್ರಾಣಕ್ಕೂ ಅಪಾಯ ಆಗ್ತಾ ಇತ್ತು. ಜೊತೆಗೆ ಏಣಿ ಮೇಲೆ ಹತ್ತಿ ಕೆಲಸ ಮಾಡ್ತಾ ಇರೋದರಿಂದ ಕೆಳಗೆ ಬೀಳುವ ಸಾದ್ಯತೆ ಹೆಚ್ಚಾಗಿದೆ.
ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರ ಇಲಾಖೆಯ ಸಿಬ್ಬಂದಿಯನ್ನೇ ಕಡೆಗಣಿಸಿದ್ದು, ಅಪಾಯದಲ್ಲಿಯೇ ಸಿಬ್ಬಂದಿ ಕೆಲಸ ಮಾಡುವ ಸ್ಥಿತಿ ಇದೆ. ಮಳೆಗಾಲ ಇನ್ನೇನು ಆರಂಭವಾಗಲಿದ್ದು ಅಲ್ಲಲ್ಲಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆ ಇರುತ್ತೆ. ಹೀಗಾಗಿ ಕೂಡಲೇ ಇಲಾಖೆ ಎಚ್ಚೆತ್ತು ಲೈನ್ ಮೆನ್‌ಗಳ ಜೀವ ಉಳಿಸುವ ದೃಷ್ಠಿಯಿಂದ ಸಿಬ್ಬಂದಿಗೆ ಭದ್ರತಾ ಉಪಕರಣಗಳನ್ನು ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.