ವಾಂಗಿ ಬಾತ್ ಇದು ದಕ್ಷಿಣ ಭಾರತದ ಪ್ರಸಿದ್ಧ ಭಕ್ಷ್ಯವಾಗಿದೆ. ಅದರಲ್ಲೂ ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಾಂಪ್ರದಾಯಿಕ ಪಾಕವಿಧಾನ ಇದಾಗಿದೆ. ಬದನೆಕಾಯಿ ಮತ್ತು ಅನ್ನದಿಂದ ತಯಾರಿಸಲಾಗುವ ಈ ಭಕ್ಷ್ಯವನ್ನು ಬೆಳಗಿನ ಉಪಹಾರಕ್ಕೆ ಹೆಚ್ಚಾಗಿ ಮಾಡಲಾಗುತ್ತದೆ. ವಿವಿಧ ರೀತಿಯ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುವ ಈ ವಾಂಗಿ ಬಾತ್ ಸಖತ್ ಟೇಸ್ಟಿ ಆಗಿರುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ವಾಂಗಿ ಬಾತ್ ಪೌಡರ್ ಸಹಾಯದಿಂದ ಬಲು ಸುಲಭವಾಗಿ ವಾಂಗಿ ಬಾತ್ ತಯಾರಿಸಬಹುದು. ವಾಂಗಿಬಾತ್ ಕರ್ನಾಟಕದ ಒಂದು ವಿಶಿಷ್ಟ ಖಾದ್ಯವಾಗಿದ್ದು, ಹುರಿದ ಬದನೆಕಾಯಿಯ ಸಾರವನ್ನು ಅನ್ನದೊಂದಿಗೆ ಕಲಸಿ ತಯಾರಿಸಲಾದ ತಿನಿಸಾಗಿದೆ.
ವಾಂಗಿಬಾತ್ ಮಾಡಲು, ಒಂದು ಬಾಣಲೆಗೆ 3 ದೊಡ್ಡ ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಸಾಸಿವೆ ಹಾಕಿ ಸಿಡಿಸಿ.ನಂತರ ಇದಕ್ಕೆ 1 ಚಮಚ ಉದ್ದಿನಬೇಳೆ, 1 ಚಮಚ ಕಡಲೆ ಬೇಳೆ, 10 ಕರಿಬೇವಿನ ಎಲೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಈಗ ಇದಕ್ಕೆ 3 ದೊಡ್ಡ ಚಮಚ ಹುರಿದ ಶೇಂಗಾ ಬೀಜ , 2 ಉದ್ದವಾಗಿ ಹೆಚ್ಚಿದ ಹಸಿರು ಉದ್ದ ಬದನೆಕಾಯಿ ಹಾಕಿ 2 ನಿಮಿಷ ಹುರಿಯಿರಿ. ನಂತರ ಇದಕ್ಕೆ 2 ಚಮಚ ಹುಣಸೆ ರಸ, 1 ಚಮಚ ಬೆಲ್ಲ, ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಕಲಸಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ ಈಗ ಇದಕ್ಕೆ ಎರಡೂವರೆ ಚಮಚ ವಾಂಗೀಬಾತ್ ಪುಡಿ ಹಾಕಿ ಕಲಸಿ.ನಂತರ ಇದಕ್ಕೆ 4 ಕಪ್ ಅನ್ನ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ ಕಲಸಿದರೆ ರುಚಿಯಾದ ವಾಂಗೀಬಾತ್ ತಿನ್ನಲು ಸಿದ್ಧ. ಹೆಚ್ಚುವರಿ ರುಚಿಗಾಗಿ ಕಡಲೆಕಾಯಿ ಮತ್ತು ಗೋಡಂಬಿ ಸೇರಿಸಬಹುದಾಗಿದೆ.
ವಾಂಗಿಬಾತ್‌ನ್ನು ಸಾಮಾನ್ಯವಾಗಿ ರಯಿತಾ / ಮೊಸರುಬಜ್ಜಿ ಅಥವಾ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಉಪ್ಪಿನಕಾಯಿ ಅಥವಾ ಚಟ್ನಿಯೊಂದಿಗೆ ಕೂಡ ವಾಂಗಿಬಾತ್ ಸವಿಯಬಹುದು. ವಾಂಗಿಬಾತ್ ಸಾಮಾನ್ಯವಾಗಿ ಹೆಚ್ಚಿನ ಉಪಹಾರ ಗೃಹಗಳಲ್ಲಿ ಲಭ್ಯವಿದೆ.