GUBBI: ತಹಶೀಲ್ದಾರ್‌ ವಿರುದ್ದ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ

ಗುಬ್ಬಿ: 

ಗುಬ್ಬಿ ತಹಶೀಲ್ದಾರ್‌ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುಬ್ಬಿ ಬಸ್‌ ನಿಲ್ದಾಣದಿಂದ ಸರ್ಕಲ್‌ ಮೂಲಕ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಾಲೂಕು ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ರೈತರು ಗುಬ್ಬಿ ತಹಶೀಲ್ದಾರ್‌ ಆರತಿ ವಿರುದ್ಧ ಘೋಷಣೆ ಕೂಗಿದ್ರು. ಭೂಮಿಗಾಗಿ ರೈತರು ಸಲ್ಲಿಸಿದ್ದ ಅರ್ಜಿಗಳನ್ನ ತಿರಸ್ಕರಿಸಿ, ರೈತ ಸಂಘದ ಸದಸ್ಯರನ್ನ ನಿಂದಿಸಿ, ಆರೋಪ ಮಾಡಿದ ತಹಶೀಲ್ದಾರ್‌ ರೈತರ ಬಳಿ ಕ್ಷಮೆ ಕೇಳಬೇಕು, ಅಲ್ದೇ ಭೂಮಿಗಾಗಿ ಸಲ್ಸಿರೋ ಅರ್ಜಿಗಳನ್ನ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ್‌ ಮಾತನಾಡಿ ತಹಶೀಲ್ದಾರ್‌ ಅವರೇ ಅರ್ಜಿ ಸಲ್ಲಿಸಲು ಎಲ್ರೂ ಬರುವ ಬದಲು ಒಬ್ಬರೇ ಗ್ರಾಮದ ಎಲ್ಲಾ ಅರ್ಜಿಗಳನ್ನ ತಂದು ಸಲ್ಲಿಸಲು ಸೂಚಿಸಿದ್ರು, ಅವರ ಮಾತಿನಂತೆ ಸಂಘದ ಸದಸ್ಯ ಅರ್ಜಿ ಸಲ್ಲಿಸಲು ಹೋದಾಗ ಎಲ್ಲಾ ಅರ್ಜಿಗಳನ್ನ ಸ್ವೀಕರಿಸಲು ಸಾಧ್ಯವಿಲ್ಲ ಅಂತೇಳಿ ಪೊಲೀಸ್‌ ಕೇಸ್‌ ಮಾಡೋದಾಗಿ ಬೆದರಿಸಿದ್ದಾರೆ. ಅಲ್ದೇ ಅರ್ಜಿಗೆ ಸಾವಿರ ರೂ ಪಡೀತಾರೆ ಎಂದು ಆರೋಪ ಮಾಡಿದ್ದಾರೆ, ಕೂಡಲೇ ತಹಶೀಲ್ದಾರ್‌ ಅವ್ರು ಕ್ಷಮೆ ಕೇಳಿ, ರೈತರಿಗೆ ಸೂಕ್ತ ಉತ್ತರ ನೀಡಬೇಕು ಅಂತ ಆಗ್ರಹಿಸಿದರು.

ಈ ವೇಳೆ ಶಾಸಕ ಎಸ್‌, ಆರ್‌ ಶ್ರೀನಿವಾಸ್‌ ಪ್ರತಿಭಟನಾ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಜೊತೆ ಮಾತನಾಡುವ ಕೆಲಸ ಮಾಡಿದ್ರು. ಈ ವೇಳೆ ರೈತ ಸಂಘದ ಪದಾಧಿಕಾರಿಗಳು ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಮುಗ್ದ ರೈತರ ದಿಕ್ಕು ತಪ್ಪಿಸೋ ಕೆಲ್ಸ ಮಾಡ್ತಿದ್ದೀರ, ಅಲ್ದೇ ಸರ್ಕಾರದ ನಿಯಮ, ಆದೇಶಗಳನ್ನ ರೈತರಿಗೆ ತಿಳಿಸೋದು ಬಿಟ್ಟು, ಜಮೀನು ಸಿಗುತ್ತೇ ಆಂತ ಅರ್ಜಿ ಹಾಕಿಸಿ, ಪ್ರತಿಭಟನೆ ಮಾಡ್ಸೋದು ಸರಿಯಲ್ಲ ಅಂತಾ ಪ್ರಾಂತ ರೈತ ಸಂಘದ ಪದಾಧಿಕಾರಿಗಳನ್ನ ಶಾಸಕರು ತರಾಟೆಗೆ ತೆಗೆದುಕೊಂಡ್ರು, ಇನ್ನೇನು ವಾಗ್ವಾದ ನಡೆದು ಮಾತು ತಾರಕಕ್ಕೇರುವ ವೇಳೆಗೆ ಪೊಲೀಸರು ಸಂಘದ ಪದಾಧಿಕಾರಿಗಳನ್ನ ಸ್ಥಳದಿಂದ ಕರೆದೊಯ್ದರು. ನಂತರ ಅರ್ಜಿ ಸಲ್ಲಿಸಲು ಬಂದಿದ್ದ ರೈತರ ಜೊತೆ ಮಾತಾಡಿ ಸರ್ಕಾರ ಈಗ ಯಾವುದೇ ಅರ್ಜಿ ಆಹ್ವಾನ ನೀಡಿಲ್ಲ, ಈ ರೀತಿ ದಿಕ್ಕು ತಪ್ಪಿಸೋರ ಬಗ್ಗೆ ಎಚ್ಚರಿಕೆ ವಹಿಸಿ, ಹಣ ನೀಡಿ ಮೋಸಕ್ಕೆ ಸಿಲುಕಬೇಡಿ ಅಂತ ಮನವಿ ಮಾಡಿ, ರೈತರ ಜೊತೆ ಚರ್ಚಿಸಿ ಸಮಾಧಾನದ ಮಾತುಗಳನ್ನಾಡಿದರು. 

Author:

share
No Reviews