ಗುಬ್ಬಿ : ಗುಬ್ಬಿ ತಾಲೂಕಿನ ಜ್ಯೋತಿ ನಗರ, ಚಿಕ್ಕೋನಹಳ್ಳಿ ಮತ್ತು ಕಡೇಪಾಳ್ಯ ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆಯ ವತಿಯಿಂದ ಈ ಮೂರು ಗ್ರಾಮಗಳಿಗೆ ತಲಾ 35 ಲಕ್ಷದ ರೂ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಎಸ್ ಆರ್ ಶ್ರೀನಿವಾಸ್, ರಾಜ್ಯದ ಜನತೆಗೆ ಕೊಟ್ಟ ಆಶ್ವಾಸನೆ ಈಡೇರಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದ್ದು, ಅದರಂತೆ ನಮ್ಮ ತಾಲೂಕಿನ ಹಲವು ಹಟ್ಟಿ ಗ್ರಾಮಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದರು. ಇನ್ನು “ಪಾಕಿಸ್ತಾನವು ಉಗ್ರಗಾಮಿಗಳನ್ನು ಪದೇಪದೆ ಪೋಷಿಸುತ್ತಿದ್ದು, ದೇಶದ ವಿರುದ್ಧ ದಾಳಿ ನಡೆಸಿದ ಸಂದರ್ಭ ನಾವು ಯುದ್ಧದ ಮೂಲಕ ಬುದ್ಧಿ ಕಲಿಸುವ ಉತ್ತಮ ಅವಕಾಶವನ್ನು ಕಳೆದುಕೊಂಡಿದ್ದೇವೆ,” ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಕೋಲಾರ ಶಾಸಕ ಕೊತ್ತುರು ಮಂಜುನಾಥ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು “ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ನಾವೆಲ್ಲ ನಮ್ಮ ದೇಶದ ಮೇಲೆ ಅಪಾರ ದೇಶಪ್ರೇಮ ಇಟ್ಟಿದ್ದು, ಅದರ ಬಗ್ಗೆ ನಾನು ಮಾತಾಡಲ್ಲ ಎಂದರು. ಇನ್ನು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಸರಿಯಾದ ಸಮಯ ಸಿಕ್ಕಿತ್ತು ಅದನ್ನು ಬಿಟ್ಟು ಯಾರೋ ಟ್ರಂಪ್ ಹೇಳಿದ ಮಾತಿಗೆ ಮಣಿದು ಯುದ್ಧ ನಿಲ್ಲಿಸಿದ್ದು ಸರಿಯಲ್ಲ ಎಂದರು.