ಪಾವಗಡ :
ಪಾವಗಡ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಮೊದಲಿಗೆ ಬರೋದು ಬರದ ನಾಡು, ಬಿಸಿಲ ನಾಡು ಅಂತ. ಇಂತಹ ಪ್ರದೇಶದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದ್ರೆ ನಡೆಯುವ ಕಾಮಗಾರಿಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತಿಲ್ಲ ಅನ್ನೋ ಆರೋಪವಿದೆ. ಕೆಲ ಕಾಮಗಾರಿಗಳು ಸಾರ್ವಜನಿಕರಿಗೆ ತಲೆ ನೋವು ತರುವುದರ ಜೊತೆಗೆ ಸಾವಿನ ಗುಂಡಿಗಳಾಗುತ್ತಿವೆ. ಪಾವಗಡದಲ್ಲಿ ಕೆ.ಶಿಪ್ ವತಿಯಿಂದ ರಸ್ತೆಯಲ್ಲಿ ಪೈಪ್ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಆದ್ರೆ ಈ ಕಾಮಗಾರಿ ಮಾಡುತ್ತಿರುವ ಕೆ.ಶಿಪ್ ಯಡವಟ್ಟಿನಿಂದಾಗಿ ಜನರು ಜೀವಭಯದಲ್ಲಿಯೇ ಸಂಚರಿಸುವಂತಾಗಿದೆ.
ಹೌದು ಯಾವುದೇ ಒಂದು ಕಾಮಗಾರಿ ಮಾಡುವ ಮೊದಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಆದ್ರೆ ಇದ್ಯಾವುದನ್ನು ಗಮನಿಸದ ಕೆ.ಶಿಪ್ ರಸ್ತೆಯನ್ನ ಅಗೆದು ಪೈಪ್ಲೈನ್ ಅಳವಡಿಸೋ ಕೆಲಸವನ್ನ ಮಾಡ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಸಂಚಾರ ಮಾಡುವ ಜನರು ಜೀವಭಯದಲ್ಲಿಯೇ ಸಂಚರಿಸಬೇಕಾಗಿದೆ. ರಸ್ತೆಯ ಕಾಮಗಾರಿ ಮಾಡುತ್ತಿವೆ ಸರಿ. ಆದರೆ, ಆ ಕಾಮಗಾರಿಯ ಸುತ್ತ ಬ್ಯಾರಿಕೇಡ್ ಇಲ್ಲವೇ ರೇಡಿಯಂ ಟೇಪ್ ಅಳವಡಿಸಬೇಕು. ಆದ್ರೆ ಕೆ.ಶಿಪ್ ಮಾತ್ರ ಇದ್ಯಾವುದನ್ನು ಮಾಡಿಲ್ಲ. ಇದರಿಂದ ಸಂಚಾರಕ್ಕೆ ಅಡ್ಡಿಉಂಟಾಗುವುದರ ಜೊತೆಯಲ್ಲಿ ಜನರು ಜೀವಭಯದಲ್ಲಿ ಓಡಾಡುವಂತಾಗಿದೆ.
ಇನ್ನು ಪಾವಗಡಕ್ಕೆ ಬೈಪಾಸ್ ಇಲ್ಲ ಅಂತ ಶಾಸಕರು ಬೈಪಾಸ್ ಮಾಡಲು ಮುಂದಾಗಿದ್ದಾರೆ. ಇದರ ನಡುವೆ ಇಲ್ಲಿ ನಡೆಯುತ್ತಿರುವ ಇಂತಹ ಕಾಮಗಾರಿಗಳಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ರಸ್ತೆಯಲ್ಲಿ ಸ್ವಲ್ಪ ಕಾಮಗಾರಿ ಮತ್ತೊಂದು ರಸ್ತೆಯಲ್ಲಿ ಮತ್ತೊಂದಷ್ಟು ಕಾಮಗಾರಿ ಮಾಡುತ್ತಿದೆ ಕೆ ಶಿಪ್. ಆದ್ರೆ, ಈ ಕಾಮಗಾರಿ ವೇಳೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಮುಂದೆ ಯಾವುದೇ ಅನಾಹುತಗಳು ಸಂಭವಿಸದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾಮಗಾರಿ ಮಾಡಬೇಕಿದೆ.